ಬೆಂಗಳೂರು: ಹುಬ್ಬಳ್ಳಿಯ ಕಿಮ್ಸ್ ವೈದ್ಯರು, ಅರೆವೈದ್ಯಕೀಯ ,ನರ್ಸಿಂಗ್ ಹಾಗೂ ಸಹಾಯಕ ಸಿಬ್ಬಂದಿ ತಂಡ ಕೊರೊನಾ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಿ ಸರ್ಕಾರದ ವೈದ್ಯಕೀಯ ಸಂಸ್ಥೆಯೊಂದರ ಬಗ್ಗೆ ಜನಸಾಮಾನ್ಯರಲ್ಲಿದ್ದ ಭಾವನೆಗಳನ್ನೇ ಬದಲಿಸುವಲ್ಲಿ ಯಶಸ್ವಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಕಿಮ್ಸ್ ಗೆ ಚಿಕಿತ್ಸೆಗೆ ಹೋದವರು ಮರಳಿ ಮನೆಗೆ ಬರುವುದಿಲ್ಲ ಎಂಬ ತಪ್ಪು ಗ್ರಹಿಕೆಯೊಂದು ಕೆಲವು ಜನವರ್ಗದಲ್ಲಿತ್ತು. ಈಗ ಈ ಕಲ್ಪನೆ ಸರಿಯಲ್ಲ, ಹುಬ್ಬಳ್ಳಿಯ ಕಿಮ್ಸ್ ಉತ್ತರ ಕರ್ನಾಟಕದ ಜನರ ಜೀವನದ ಪಾಲಿಗೆ ಸಂಜೀವಿನಿ ಎಂಬುದನ್ನು ಕಿಮ್ಸ್ ತಂಡ ಸಾಬೀತುಪಡಿಸುತ್ತಿದೆ. ಕೋಟಿಗಟ್ಟಲೆ ಹಣ ಖರ್ಚು ಮಾಡಿ ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾಗೆ ಚಿಕಿತ್ಸೆ ಪಡೆದರೂ ಗುಣವಾಗುತ್ತಿಲ್ಲ.ಬದಲಿಗೆ ಕಿಮ್ಸ್ ಗೆ ದಾಖಲಾದವರು ಗುಣಮುಖರಾಗಿ ಮನೆಗೆ ಹೋಗುತ್ತಿದ್ದಾರೆ.ಬಹಳಷ್ಟು ರೋಗಿಗಳು ಕಿಮ್ಸ್ ಬಗ್ಗೆ ಗುಣಗಾನ ಮಾಡುತ್ತಿದ್ದಾರೆ....


ಕಿಮ್ಸ್ ಅಂದರೆ ಉತ್ತರ ಕರ್ನಾಟಕದ ಸಂಜೀವಿನಿ. ಉತ್ತರ ಕರ್ನಾಟಕದ ೮ ಜಿಲ್ಲೆಯ ಜನರು ಇಲ್ಲಿಗೆ ಬಂದು ಚಿಕಿತ್ಸೆ ಪಡೆದು ಹೋಗುತ್ತಿದ್ದಾರೆ. ಆದರೆ ಕೊರೊನಾ ವಿಷಯ ದಲ್ಲಿ ಕರ್ನಾಟಕಕ್ಕೇ ಸಂಜೀವಿನಿ ಆಗಿದೆ. ದಕ್ಷಿಣ ಕರ್ನಾಟಕದ ಜನರು ಬಂದು ಕೊರೊನಾಗೆ ಚಿಕಿತ್ಸೆ ಪಡೆದು ಹೋಗುತ್ತಿದ್ದಾರೆ. ಮೆಡಿಸಿನ್ ವಿಭಾಗದವರ ಮುಖ್ಯಪಾತ್ರ ಇದರಲ್ಲಿದೆ. ಡಾ. ಈಶ್ವರ ಹಸಬಿ, ಡಾ. ಸಚಿನ್ ಹೊಸಕಟ್ಟಿ, ಡಾ.ರಾಮ್ ಕೌಲಗುಡ್ಡ, ಡಾ. ಸಂಜಯ ನೀರಲಗಿ ಬಹುಮುಖ್ಯ ಪಾತ್ರ ವಹಿಸಿದ್ದಾರೆ. ಪ್ಯಾಥಾಲಜಿ, ಶ್ವಾಸಕೋಶ, ಇಎನ್ ಟಿ, ಶಸ್ತ್ರಚಿಕಿತ್ಸೆ, ಮೈಕ್ರೋಬಯಾಲಜಿ,ಅರವಳಿಕೆ ತಜ್ಞರ ಶ್ರಮವೂ ಇದೆ. ಈಗಾಗಲೇ 600 ಬೆಡ್‌ ವ್ಯವಸ್ಥೆ ಮಾಡಲಾಗಿದೆ. ಇನ್ನೂ 400 ಬೆಡ್ ಹೆಚ್ಚಿಸುವ ಸಾಧ್ಯತೆ ಇದೆ. 30 ಜನರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಿ ಹೆಸರು ಮಾಡಿದೆ ಕಿಮ್ಸ್. 16 ಜನರು ಪ್ಲಾಸ್ಮಾ ನೀಡಿ ರಾಜ್ಯ ಸರ್ಕಾರದ ಪ್ರೋತ್ಸಾಹಧನ ಪಡೆದಿದ್ದಾರೆ.


ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಮಹಾದೇವಪ್ಪ ನಾಯ್ಕರ್ , ಕಿಮ್ಸ್ ಚಿಕಿತ್ಸಾ ಸೌಲಭ್ಯಗಳ ಬಗ್ಗೆ ಸದಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಈಗ ಚಿಕಿತ್ಸೆ ಪಡೆಯುತ್ತಿರುವ ಎಲ್ಲರಿಗೂ ಊಟ, ವಸತಿ, ಉಪಹಾರ, ಚಹಾ ಎಲ್ಲವೂ ಅಚ್ಚುಕಟ್ಟಾಗಿ ನಡೆಯುತ್ತಿದೆ. ಬಾತ್ ರೂಂ, ಶೌಚಾಲಯ ವೂ ನೈರ್ಮಲ್ಯದಿಂದ ಕೂಡಿವೆ. ಮನೆಯ ವಾತಾವರಣವೇ ನಿರ್ಮಾಣವಾಗಿದೆ. ವೈದ್ಯಕೀಯ ಸಿಬ್ಬಂದಿಯ ಸೇವೆ ಅನನ್ಯವಾಗಿದೆ ಎಂದು ಹುಬ್ಬಳ್ಳಿಯ ವಿಜಯಕುಮಾರ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದ್ದಾರೆ.


ಕಿಮ್ಸ್ ತನ್ನ ಸಾಧನೆಯ ಇತಿಹಾಸ ವನ್ನು ರಾಜ್ಯಾದ್ಯಂತ ಪಸರಿಸುತ್ತಿದೆ. ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಚವ್ಹಾಣ ಅವರು ವೈದ್ಯಕೀಯ ತಂಡಕ್ಕೆ ಹುರುಪು ತುಂಬಿ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ವೈದ್ಯಕೀಯ ಶಿಕ್ಷಣ ಸಚಿವಾದ ಡಾ. ಕೆ. ಸುಧಾಕರ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಜಗದೀಶ ಶೆಟ್ಟರ್ ಹಾಗೂ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಕಿಮ್ಸ್ ನ ಪ್ರತಿ ಕೆಲಸಕ್ಕೂ ಬೆನ್ನೆಲುಬಾಗಿದ್ದಾರೆ.


ಮಾಹಿತಿ: ವಾರ್ತಾ ಇಲಾಖೆ