ಹುಬ್ಬಳ್ಳಿ- ಸೊಲ್ಲಾಪುರ ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕೆ ತಾತ್ವಿಕ ಒಪ್ಪಿಗೆ
ಕೇಂದ್ರ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಬೆಂಗಳೂರಿನಲ್ಲಿಂದು ರಾಷ್ತ್ರೀಯ ಹೆದ್ದಾರಿ ಕಾಮಗಾರಿಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು.
ಬೆಂಗಳೂರು: ಹುಬ್ಬಳ್ಳಿ- ಸೊಲ್ಲಾಪುರ ಚತುಷ್ಪಥ ಹೆದ್ದಾರಿ ರಸ್ತೆ ನಿರ್ಮಾಣ ಪ್ರಸ್ತಾವನೆಗೆ ಆರ್ಥಿಕ ಪ್ರಾಮುಖ್ಯತೆ ಹಾಗೂ ಅಂತರ್ ರಾಜ್ಯಗಳ ಸಂಪರ್ಕ ಯೋಜನೆಯಡಿ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ತಾತ್ಪಿಕ ಒಪ್ಪಿಗೆ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ(Govind M Karajola) ತಿಳಿಸಿದ್ದಾರೆ.
ಕೇಂದ್ರ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ(Nitin Gadkari) ಬೆಂಗಳೂರಿನಲ್ಲಿಂದು ರಾಷ್ತ್ರೀಯ ಹೆದ್ದಾರಿ ಕಾಮಗಾರಿಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು. ಸಭೆಯಲ್ಲಿ, ಹುಬ್ಬಳಿ- ಸೊಲ್ಲಾಪರ ಮಾರ್ಗದಲ್ಲಿ ವಾಹನಗಳ ಸಂಚಾರ ಅಧಿಕ ಪ್ರಮಾಣದಲ್ಲಿದ್ದು, ಈ ಮಾರ್ಗವನ್ನು ಚತುಷ್ಪಥ ರಸ್ತೆಯನ್ನಾಗಿ ನಿರ್ಮಿಸಿದರೆ ಸುಗಮ ಸಂಚಾರ ಹಾಗೂ ಅಂತರ್ ರಾಜ್ಯ ಸಂಪರ್ಕಕ್ಕೆ ಅನುಕೂಲವಾಗುತ್ತದೆ. ಈ ಮಾರ್ಗವು ಪ್ರಮುಖ ಮಾರ್ಗವಾಗಿದ್ದು, ಈ ಹೆದ್ದಾರಿಯನ್ನು ಚತುಷ್ಪಥ ಹೆದ್ದಾರಿಗೆ ಮೇಲ್ದರ್ಜೆಗೇರಿಸುವ ಪ್ರಾಮುಖ್ಯತೆಯ ಬಗ್ಗೆ ವಿವರಿಸಲಾಯಿತು. ಇದನ್ನರಿತ ಕೇಂದ್ರ ಸಾರಿಗೆ ಸಚಿವರು ಕೂಡಲೇ ಹುಬ್ಬಳ್ಳಿ- ಸೊಲ್ಲಾಪುರ ಚತುಷ್ಪಥ ಹೆದ್ದಾರಿ ರಸ್ತೆ ನಿರ್ಮಾಣ ಪ್ರಸ್ತಾವನೆಗೆ ತಾತ್ವಿಕ ಒಪ್ಪಿಗೆ ನೀಡಿ, ಈ ಚತುಷ್ಪಥ ಹೆದ್ದಾರಿ ಕಾಮಗಾರಿ ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆಗೆ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾಹಿತಿ ನೀಡಿದರು.
ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ(BS Yediyurappa), ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ, ಸಚಿವರಾದ ಜಗದೀಶ್ ಶೆಟ್ಟರ್, ಲೋಕೋಪಯೋಗಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗಳಾದ ಡಾ. ರಜನೀಶ್ ಗೋಯಲ್, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.