ವಿನಯವಂತ ಬಸವಣ್ಣ ಮತ್ತು ಸಮಕಾಲೀನ ನೋಟ ಕ್ರಮ
ವಿನಯಾ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಈಗ ಕವಿ ವೀರಣ್ಣ ಮಡಿವಾಳರ ಅವರು ಫೇಸ್ ಬುಕ್ ನಲ್ಲಿ ತಮ್ಮ ಪ್ರತಿಕ್ರಿಯೆಯನ್ನು ದಾಖಲಿಸಿದ್ದಾರೆ. ಅದನ್ನು ಇಲ್ಲಿ ಯಥಾವತ್ತಾಗಿ ಪ್ರಕಟಿಸಲಾಗಿದೆ,
ಕಲಬುರ್ಗಿಯಲ್ಲಿ ಇತ್ತೀಚೆಗೆ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಲೇಖಕಿ ವಿನಯಾ ಒಕ್ಕುಂದ ಅವರು ಬಸವಣ್ಣನವರ ಕುರಿತಾಗಿ ನೀಡಿದ್ದ ಹೇಳಿಕೆಯು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು,ಈ ವಿಚಾರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಈಗ ವಿನಯಾ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಈಗ ಕವಿ ವೀರಣ್ಣ ಮಡಿವಾಳರ ಅವರು ಫೇಸ್ ಬುಕ್ ನಲ್ಲಿ ತಮ್ಮ ಪ್ರತಿಕ್ರಿಯೆಯನ್ನು ದಾಖಲಿಸಿದ್ದಾರೆ. ಅದನ್ನು ಇಲ್ಲಿ ಯಥಾವತ್ತಾಗಿ ಪ್ರಕಟಿಸಲಾಗಿದೆ,
ವಿನಯವಂತ ಬಸವಣ್ಣ ಮತ್ತು ಸಮಕಾಲೀನ ನೋಟ ಕ್ರಮ
ಓದಿನ ಹಿರಿಯರು, ವೇದದ ಹಿರಿಯರು
ಶಾಸ್ತ್ರದ ಹಿರಿಯರು ಪುರಾಣದ ಹಿರಿಯರು
ವೇಷದ ಹಿರಿಯರು, ಭಾಷೆಯ ಹಿರಿಯರು
ಇವರೆಲ್ಲರು
ತಮ್ಮ ತಮ್ಮನೆ ಮೆರೆದರಲ್ಲದೆ
ನಿಮ್ಮ ಮೆರೆದುದಿಲ್ಲ
ಎನ್ನುತ್ತಾರೆ ಬಸವಣ್ಣ. ತನ್ನ ಕಾಲಮಾನದ ಮತ್ತು ಎಲ್ಲ ಕಾಲಮಾನದ ಮನುಷ್ಯ ಶ್ರೇಷ್ಠ ಬದುಕನ್ನ ಬದುಕಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ ಬಸವಣ್ಣರನ್ನು ಇಂದು ನಮ್ಮ ಓದಿನ ಹಿರಿಯರು ತಮಗೆ ಬೇಕಾದಂತೆ ವ್ಯಾಖ್ಯಾನಿಸುತ್ತಾ ಬಸವ ತೋರಿದ ಬೆಳಕಿಗೆ ಬೆಲೆ ಕಟ್ಟುತ್ತಾ ಅಪಮೌಲ್ಯೀಕರಣಕ್ಕೆ ತೊಡಗಿದ್ದಾರೆ. ತನ್ನನ್ನ ತನ್ನತನವನ್ನ ತನ್ನೊಳಗನ್ನ ಸದಾ ನಿಕಷಕ್ಕೊಡ್ಡಿದ ಬಸವಣ್ಣರಿಗೆ ಇಂದಿನ ಕೆಲವು ಅಹಂಕಾರಿಗಳು ‘ಅಹಂಕಾರಿಯ ಪಟ್ಟ’ ಕಟ್ಟಿ ಖುಷಿಪಡುತ್ತಿದ್ದಾರೆ ತಮ್ಮ ತಮ್ಮ ಮನವ ಸಂತೈಸಿಕೊಳ್ಳುತ್ತಿದ್ದಾರೆ. ತಮ್ಮ ತಮ್ಮವರದ್ದೇ ಮೆರವಣಿಗೆಯಲ್ಲಿ ತಾವೇ ಮೆರೆಯುತ್ತಾ ಬಸವಣ್ಣನವರ ವ್ಯಕ್ತಿತ್ವಕ್ಕೆ ಕಲ್ಲು ಎಸೆಯುತ್ತಿದ್ದಾರೆ.
ಈ ಕಾಲದ ವಿದ್ಯಮಾನಗಳೇನು, ಇಲ್ಲಿ ಯಾರ ಯಾರ ನಡುವೆ ಸಂಘರ್ಷಗಳಿವೆ, ಯಾರ ಜೊತೆಗೆ ಯಾರು ನಿಲ್ಲಬೇಕು ಎಂಬ ಕನಿಷ್ಠ ಪರಿಜ್ಞಾನವಿಲ್ಲದವರು ಬಸವಣ್ಣನವರನ್ನ ಅಪಖ್ಯಾನ ಮಾಡುತ್ತಲೇ ಈ ಕಾಲಮಾನಕ್ಕೇ ದ್ರೋಹ ಬಗೆಯುತ್ತಿದ್ದಾರೆ. ಪ್ರಶ್ನಿಸಿದರೆ ನಾವು ಬಗಲ ಚೂರಿಗಳು, ಕೈದುಗಳು ಇನ್ನೂ ಏನೆಲ್ಲ. ತಪ್ಪನ್ನ ತಪ್ಪು ಎಂದು ಹೇಳುವ ಎದೆಗಾರಿಕೆಯಿಲ್ಲದ, ಯಾರು ಈ ಕಾಲವನ್ನ ಅಪವ್ಯಾಖ್ಯಾನಿಸುತ್ತಿದ್ದಾರೆ ಅವರಿಗೇ ಇಲ್ಲಿ ಪೂರ್ವ ನಿರ್ಧಾರಿತ ಫರಾಕುಗಳಿವೆ. ಇಪ್ಪತ್ತು ಸಾವಿರ ವಚನ ಓದಿರುವೆನೆಂಬ ಮಹನೀಯರಿಗೆ ಮತ್ತೊಬ್ಬರ ಪ್ರತಿರೋಧವನ್ನ ಸೌಜನ್ಯದಿಂದ ಎದಿರುಗೊಳ್ಳುವ ಸಹನೆಯಿಲ್ಲ.
‘ಒಂದನಾಡಹೋಗಿ ಒಂಭತ್ತನಾಡುವ ಡಂಬಕರ ಮೆಚ್ಚ ಕೂಡಲಸಂಗಯ್ಯ’ ಎನ್ನುತ್ತಾರೆ ಬಸವಣ್ಣ. ಹಾಗೆ ತಮ್ಮ ತಮ್ಮ ಕಿರೀಟಗಳ ಸುಪರ್ದಿಗಾಗಿ ಮತ್ತೊಬ್ಬರ ಕಡೆ ಬೆರಳು ಮಾಡಿಯೇ ತಮ್ಮ ಗರ್ವವನ್ನು ತಣಸಿಕೊಳ್ಳುವ ಮಂದಿ ನಮ್ಮ ಮಧ್ಯ ಬಹಳ ಜನ ಇದ್ದಾರೆ.
ನಾವು ವಚನ ಚಳುವಳಿಯನ್ನು ವರ್ಗ ಸಂಘರ್ಷವಾಗಿ ಜಾತಿ ಸಂಘರ್ಷವಾಗಿ ಗುಣಅವಗುಣಗಳ ಸಂಘರ್ಷವಾಗಿ ಸತ್ಯ ಸುಳ್ಳಿನ ಸಂಘರ್ಷವಾಗಿ ಪೊಳ್ಳುಗಟ್ಟಿತನದ ಸಂಘರ್ಷವಾಗಿ ನೋಡಬಹುದು. ಆದರೆ ಇಲ್ಲೊಬ್ಬರು ಮಾತ್ರ ಇಡೀ ವಚನ ಚಳುವಳಿಯನ್ನು “ವಚನಕಾರರು ಮತ್ತು ವಚನಕಾರ್ತಿಯರ ಮಧ್ಯದ ಸಂಘರ್ಷವಾಗಿ” ನೋಡುತ್ತಾ ಇಡೀ ವಚನ ಬಂಡಾಯದ ಆಶಯವನ್ನೇ ಮುಕ್ಕಾಗಿಸುತ್ತಿದ್ದಾರೆ ಮತ್ತು ತಮ್ಮ ಸಂಕುಚಿತ ದೃಷ್ಟಿಕೋನವನ್ನ ಬಹಿರಂಗಗೊಳಿಸಿಕೊಂಡಿದ್ದಾರೆ.
ಶಿವರಂಜನ್ ಸತ್ಯಂಪೇಟೆಯವರು ಶರಣ ಮಾರ್ಗ ಪತ್ರಿಕೆಗೆ ನಡೆಸಿದ ಸಂದರ್ಶನದಲ್ಲಿ ಡಾ.ವಿನಯಾ ರವರು ಹೇಳುತ್ತಾರೆ “ಆದರ್ಶವನ್ನು ಮಾತನಾಡುವುದಕ್ಕೂ ಮತ್ತು ಬದುಕುವುದಕ್ಕೂ ಬಹಳ ವ್ಯತ್ಯಾಸವಿದೆ. ವಚನಕಾರರು ಯಾವ ದೊಡ್ಡ ಫಿಲಾಸಫಿ ಕೊಟ್ಟರೋ ಅದನ್ನು ಬದುಕಲಿಕ್ಕೆ ಅವರಿಗೆ ಕಷ್ಟವಾಯಿತು. ಆದರೆ ವಚನಕಾರ್ತಿಯರಿಗೆ ಅದು ಸಾಧ್ಯವಾಯಿತು” ಎನ್ನುತ್ತಾರೆ.
ವಿನಯಾರವರ ಸಮಸ್ಯೆ ಇರುವುದೇ ಅವರ ಈ ರೀತಿಯ ಅಹಂಕಾರದಲ್ಲಿ. “ಯಾವ ದೊಡ್ಡ ಫಿಲಾಸಫಿ” ಎಂಬ ಪದಪ್ರಯೋಗ ದುರಹಂಕಾರದ ಪ್ರತೀಕವೇ ಹೊರತು ಮತ್ತೇನಲ್ಲ. ವಚನ ಚಳುವಳಿಯ ಕಾಳಜಿ ಮತ್ತು ಬಲಿದಾನಗಳ ಅರಿವಿದ್ದವರು ಈ ರೀತಿಯ ಮಾತುಗಳನ್ನ ಆಡಲಾರರು. ಮತ್ತು ಇಂಥವರ ಬಗ್ಗೆ ನಮ್ಮ ಸಾಂಸ್ಕೃತಿಕ ಚಿಂತಕರೊಬ್ಬರು ಹೇಳುತ್ತಾರೆ “ಹನ್ನೆರಡನೇ ಶತಮಾನದ ಅಕ್ಕಮಹಾದೇವಿಯ ಅಂತಃಸ್ಸತ್ವವನ್ನೂ ಮತ್ತು ಸಿದ್ದಲಿಂಗಯ್ಯನವರ ಸಿಟ್ಟಿನ ಸಾತ್ವಿಕತೆಯನ್ನೂ ಮೈಗೂಡಿಸಿಕೊಂಡು ಬರೆಯುತ್ತಿರುವ ಕವಯತ್ರಿ ವಿನಯಾ” ಅಂತ. ಇಲ್ಲಿ ಯಾರಿಗೆ ಯಾರು ಎಂಥ ಪಟ್ಟಗಟ್ಟುತ್ತಿದ್ದಾರ ಮೆರೆಸುತ್ತಿದ್ದಾರೆ! ಸೋಜಿಗವೆನ್ನಿಸುತ್ತದೆ. ಶರಣರದ್ದೇ ‘ಯಾವ ದೊಡ್ಡ ಫಿಲಾಶಫಿ’ ಎಂದು ಹೀಗಳೆಯುವ ಡಾ.ವಿನಯಾರವರು ತಮ್ಮ ಬದುಕಿನಲ್ಲಿ ಸಾಧಿಸಿದ್ದೇನು? ಅಕ್ಕಮಹಾದೇವಿ ಬದುಕಿದ ದಾಂಪತ್ಯ ಎಂತಹದ್ದು, ಅಕ್ಕನ ಬದುಕು ಎಂತಹದ್ದು ಈ ವಿನಯಾ ರು ಬದುಕುತ್ತಿರುವ ಕಂಫರ್ಟ್ ಝೋನಿನ ಬದುಕು ಎಂತಹದ್ದು? ಸಿದ್ದಲಿಂಗಯ್ಯನವರ ಸಿಟ್ಟು ಈ ನಾಡಿಗೆ ಕೊಟ್ಟ ಕೊಡುಗೆ ಏನು? ವಿನಯಾ ರವರ ಸಿಟ್ಟು ಏಕಪಕ್ಷೀಯವಾಗಿ ಅದು ಬಸವಣ್ಣ ಮತ್ತು ಇತರ ಪುರುಷ ವಚನಕಾರರ ಮೇಲಿನ ಅಸಹನೆಯಾಗಿ ಈಗ ಮಾಡುತ್ತಿರುವುದಾದರೂ ಏನು?
‘ಮೃದು ವಚನವೇ ಸಕಲ ಜಪಂಗಳಯ್ಯಾ, ಮೃದು ವಚನವೇ ಸಕಲ ತಪಂಗಳಯ್ಯಾ’ ಎಂದ ಬಸವಣ್ಣನವರ ಕುರಿತು ವಿನಯಾರವರ ದೃಷ್ಟಿಕೋನವೇ ಬೇರೆ ಇದೆ. ವಿನಯಾರವರು ಹೇಳುತ್ತಾರೆ
“ಬಸವಣ್ಣನಿಗೂ ಪುರುಷ ಅಹಂಕಾರವನ್ನು ಇಳಿಸಿಕೊಳ್ಳುವುದು ಸಾಧ್ಯವಾಗಿರಲಿಲ್ಲ”
“ಅಷ್ಟು ಗಟ್ಟಿಯಾಗಿ ಗಂಡಸುತನದ ಗರ್ವವನ್ನು ಕಳೆದುಕೊಳ್ಳುವುದು ಸುಲಭವಾಗಿರಲಿಲ್ಲ”
“ಎನ್ನ ಸತಿ ನೀಲಲೋಚನೆ ಗಗ್ಗಳೆಯ ಚಲುವೆ… ಎಂದ ಬಸವಣ್ಣನೂ ಹೆಣ್ಣನ್ನು ದೇಹವಾಗಿ ನೋಡುವ ಶಾಪದಿಂದ ಮುಕ್ತನಾಗಿರಲಿಲ್ಲ”
“ಪರಂಪರಾಗತ ರೋಗಗ್ರಸ್ಥ ಚಿಂತನೆಯಿಂದ ಹೊರಬರುವುದು ಬಹಳ ಕಠಿಣವಾಗಿತ್ತು”
ಇನ್ನೂ ಮುಂದುವರೆದು ಡಾ.ವಿನಯಾ ರವರು ಹೇಳುತ್ತಾರೆ
“ವಚನ ಚಳುವಳಿಯಲ್ಲಿ ಹೆಣ್ಣಿನ ಕುರಿತ ಆದರ್ಶ ಮತ್ತು ಮಾನವೀಯತೆಯ ಮಾತುಗಳು ಬದುಕಿನಲ್ಲಿ ಅನುಸಂಧಾನ ಮಾಡಲು ಸಾಧ್ಯವಾಗಲಿಲ್ಲ, ಬಹುತೇಕವು ಮಾತುಗಳಾಗಿ ಉಳಿದಿದ್ದು, ಬಸವಣ್ಣನೂ ಸೇರಿ ವಚನಕಾರರಿಗೆ ಅವುಗಳನ್ನು ಅನುಸಂಧಾನ ಮಾಡುವುದು ಕಷ್ಟವಾಗಿತ್ತು”.
ಇಡೀ ಜಗತ್ತಿನಲ್ಲಿಯೇ ಸಮಾನತೆಯನ್ನ ಮಾನವೀಯತೆಯನ್ನು ವಿಶ್ವಶ್ರೇಷ್ಠ ಮೌಲ್ಯಗಳನ್ನು ಪ್ರತಿಪಾದಿಸಿ ಬದುಕಿ ತೋರಿದ ವಚನ ಚಳುವಳಿಯ ಶರಣರ ಅಸ್ತಿತ್ವವನ್ನೇ ಅಲುಗಾಡಿಸುವ ಮತ್ತು ಪ್ರಶ್ನಿಸುವ ನಮ್ಮ ವಿನಯಾರವರನ್ನೇ ಈ ಕಾಲದ ನಮ್ಮ ಕರ್ನಾಟಕದ ಸಾಂಸ್ಕೃತಿಕ ನಾಯಕಿಯನ್ನಾಗಿ ಘೋಷಿಸಬೇಕು ಎನ್ನಿಸುತ್ತದೆ. ಯಾರ್ರೀ ಇವರೆಲ್ಲ?
“ಒಳಗೆ ಕುಟಿಲ ಹೊರಗೆ ವಿನಯವಾಗಿ
ಭಕ್ತರೆನಿಸಿಕೊಂಬವರ ಬಲ್ಲನೊಲ್ಲನಯ್ಯಾ ಲಿಂಗವು” ಎಂದು ಬಸವಣ್ಣನವರು ಹೇಳಿದ್ದು ಇಂಥವರ ಕುರಿತೇ ಇರಬೇಕು ಎನ್ನಿಸುತ್ತದೆ. ಇಂಥವರ ಜೊತೆ ನಾವಿಂದು ಸಂಘರ್ಷಕ್ಕಿಳಿಯಬೇಕಿರುವುದು ವಾಗ್ವಾದಕ್ಕಿಳಿಯಬೇಕಿರುವುದು ಈ ಕಾಲದ ದುರಂತ. ಮತ್ತು ಹೀಗಿದ್ದಾಗಿಯೂ ಇವರನ್ನ ಪ್ರಶ್ನಿಸಿದರೆ ನಾವು ಬಸವಣ್ಣರನ್ನ ದೇವರೆಂದು ನಂಬುವವರು ಮತ್ತು ಭಕ್ತರು ಎಂಬ ಸ್ವಕಲ್ಪಿತ ಆರೋಪಗಳು.
“ಇದಿರ ಗುಣವ ಬಲ್ಲೆವೆಂಬರು, ತಮ್ಮ ಗುಣವನರಿಯರು” ಎಂದು ಬಸವಣ್ಣನವರು ಹೇಳಿದ್ದು ಯಾರ ಕುರಿತು ತಿಳಿಯಿತೇ?
ಎಷ್ಟೆಲ್ಲ ರೋಷ ದ್ವೇಷ ಆಕ್ರೋಷ ಇವರಿಗೆ ಆಶ್ಚರ್ಯವಾಗುವುದಿಲ್ಲವೇ? ಬಸವಣ್ಣನವರ ಮಾತಿನಲ್ಲೇ ಇಂಥವರಿಗೆ ಹೇಳಬಹುದಾದದ್ದೇನು?
“ಅರತವಡಗದು ಕ್ರೋಧ ತೊಲಗದು
ಕ್ರೂರ ಕುಭಾಷೆ ಕುಹಕ ಬಿಡದನ್ನಕ್ಕ
ನೀನೆತ್ತಲು ಶಿವನೆತ್ತಲು ಹೋಗತ್ತ ಮರುಳೆ”.
ಶರಣ ಚಳುವಳಿಯ ಕುರಿತು ತಮ್ಮಿಡೀ ಬದುಕನ್ನ ಜೀವಗಳನ್ನ ರಕ್ತಪಾತಕ್ಕೊಡ್ಡಿ ಕತ್ತುಕೊಟ್ಟು ತಾವು ನಂಬಿದ ತತ್ವಕ್ಕೆ ಬದ್ಧರಾಗಿ ಆ ತತ್ವಗಳು ಮೌಲ್ಯಗಳು ತಲೆಮಾರುಗಳಿಗೆ ತಲುಪಲಿ ಎಂದು ಹೋರಾಡಿ ಜೀವತೆತ್ತಮೇಲೂ ಅವರನ್ನ ಹೀಗೆ ಅವಮಾನಿಸುವ ಅನುಮಾನಿಸುವ ಡಾ.ವಿನಯಾ ರವರು ಅದೆಷ್ಟು ದೊಡ್ಡ ವ್ಯಕ್ತಿ ಅಲ್ಲವೇ?
“ನೂರನೋದಿ ಏವೆನಯ್ಯಾ ನಮ್ಮ ಕೂಡಲ ಸಂಗಮದೇವರ ಮನಮುಟ್ಟದನ್ನಕ್ಕ” ಎಂದು ಬಸವಣ್ಣ ಸುಮ್ಮನೇ ಹೇಳಿದರೆ?
ಈಗ ನಮ್ಮೊಂದಿಗಿಲ್ಲದ ಮಹಾಚೇತನಗಳನ್ನು ಇವರು ಪ್ರಶ್ನಿಸಿದರು ಸರಿ. ಸಮಕಾಲೀನ ಘಟನೆಗಳಿಗೆ ಅದರಲ್ಲೂ ನಮ್ಮ ನಾಡಿನಲ್ಲೇ ನಿತ್ಯ ನಡೆವ ದುರಂತಗಳಿಗೆ ಇವರ ಸ್ಪಂದನೆಗಳೇನು ಮತ್ತು ತೆಗೆದುಕೊಂಡ ಜವಾಬ್ದಾರಿಗಳೇನು ಮತ್ತು ಕಟ್ಟಿದ ಹೋರಾಟಗಳೆಷ್ಟು, ಗೆದ್ದ ಮಾದರಿಗಳೆಷ್ಟು? ಇದು ವೈಯಕ್ತಿಕ ಸಾಮಾಜಿಕ ಐತಿಹಾಸಿಕ ಎಂಬುದು ಪ್ರಶ್ನೆಯಲ್ಲ. ಶರಣರು ಅವರ ಕಾಲಕ್ಕೆ ಅವರ ಮಿತಿಗೆ ಅವರ ತಾಕತ್ತಿಗೆ ಅವರ ಪ್ರಾಮಾಣಿಕತೆಗೆ ಅವರ ಬದ್ಧತೆಗೆ ತಕ್ಕಂತೆ ಬದುಕಿದರು ಪ್ರಾಣಾರ್ಪಣೆ ಮಾಡಿದರು.
ಬಹುಶಃ ನಾವು ಕಂಡರಿಯದ ಕೇಳರಿಯದ ಮಹಾದುರಂತಕ್ಕೆ ಒಬ್ಬನ ಕಾಮಕ್ರೌರ್ಯಕ್ಕೆ ಸಾವಿರ ಸಾವಿರ ಮಹಿಳೆಯರು ಬಲಿಯಾದರಲ್ಲ ಅದಕ್ಕೆ ಇವರ ಸ್ಪಂದನೆಯೇನು? ಆ ಕ್ರೌರ್ಯವನ್ನು ಎದುರುಗೊಂಡು ಸಾವಿರಾರು ಜನ ಚಳುವಳಿಗಾರರು ಹಾಸನದ ಬೀದಿಯಲ್ಲಿ ಧಿಕ್ಕಾರ ಕೂಗುವಾಗ ವಿನಯಾರವರು ಎಲ್ಲಿದ್ದರು ಎಂದು ನಾವು ಪ್ರಶ್ನಿಸಬಾರದೇಕೆ?
ಅದೂ ಹೋಗಲಿ, ಈ ಕಾಲದಲ್ಲಿ ಬರೆಯುತ್ತಿರುವ ಹೆಣ್ಣುಮಗುವೊಂದು ಫೇಸ್ ಬುಕ್ ನಲ್ಲಿ ಲೈವ್ ಬಂದು ಘಂಟೆಗಟ್ಟಲೆ ತನ್ನ ತಾಯಿ ಕೊಟ್ಟ ಹಿಂಸೆಯನ್ನ ಎಳೆಎಳೆಯಾಗಿ ಬಿಚ್ಚಿಟ್ಟಿತಲ್ಲ, ಆ ಮಗುವಿಗೆ ವಿನಯಾರ ಸ್ಪಂದನೆ ನಿರೀಕ್ಷಿಸಬಾರದೇ? ಶರಣರ ಬದ್ಧತೆಯನ್ನೇ ಪ್ರಶ್ನಿಸುವ ವಿನಯಾರವರು ತಮ್ಮ ಸಮಕಾಲೀನ ಕವಯತ್ರಿ ಬರಹಗಾರ್ತಿ ಎಂದು ಹೇಳಿಕೊಳ್ಳುವು ದಿನಕೊಂದು ಹೆಸರು ಬದಲಾಯಿಸಿಕೊಳ್ಳುವ ಆ ಕ್ರೂರಿಗೆ ಯಾವ ಶಿಕ್ಷೆ ಕೊಡಿಸಿದರು?
ಅದೂ ಹೋಗಲಿ, ಇವರ ಪ್ರಕಾರ ಬಸವಣ್ಣನವರದ್ದು ದೇಹಕೇಂದ್ರಿತ ಶಾಪಗ್ರಸ್ತ ನೋಟ. ಸರಿ. ಇವರದೇ ಸಂಗಾತಿ ಎಂ.ಡಿ.ವಕ್ಕುಂದ ರವರು ದೇಹವನ್ನೇ ಕೇಂದ್ರವಾಗಿಟ್ಟುಕೊಂಡು ಲೈಂಗಿಕತೆಯನ್ನೇ ವಸ್ತುವಾಗಿಟ್ಟುಕೊಂಡು ಜನನಾಂಗಗಳನ್ನೇ ರೂಪಕಗಳಾಗಿಟ್ಟುಕೊಂಡು “ನಾನು ಉಕ್ಕುತ್ತೇನೆ, ಅವಳು ತುಳುಕುತ್ತಾಳೆ” ಎಂದೆಲ್ಲ ಬರೆದರಲ್ಲ ಇದಕ್ಕೆ ಇದುವರೆಗೂ ವಿನಯಾರವರ ಪ್ರತಿಕ್ರಿಯೆ ದಾಖಲಾಗಿಲ್ಲವೇಕೆ?
ವಚನ ಸಾಹಿತ್ಯದಲ್ಲಿ ಪಿತೃ ಪ್ರಧಾನ ರಾಜಕೀಯವನ್ನು ಗುರುತಿಸುವ ವಿನಯಾರವರು ಮಹಾಸೂಕ್ಷ್ಮ ಚಿಂತಕಿಯರಂತೆ! “ಇವ ನಮ್ಮವ ಇವ ನಮ್ಮವ” ಎಂದು ಹೇಳುವಾಗ ಮಹಿಳೆಯರು ಎಲ್ಲಿ? ಇಲ್ಲಿ ಮಹಿಳೆಯರು ಇದ್ದಾರೆಯೇ? ಎಂದು ಪ್ರಶ್ನಿಸುವ ವಿನಯಾರದ್ದು ಮೂರ್ಖತನವೆಂಬುದು ಎಂಥ ಸಾಮಾನ್ಯರಿಗೂ ಅರ್ಥವಾಗುತ್ತದೆ.
ಸಕಲಜೀವಕೂ ಲೇಸನೇ ಬಯಸಿದ ನಮ್ಮ ನಿಜಶರಣರ ಅಪಮಾನ ಅಪಮೌಲ್ಯೀಕರಣ ನಿಲ್ಲಲಿ ಮತ್ತು ಡಾ.ವಿನಯಾರಂಥ ಪೂರ್ವಾಗ್ರಹ ಪೀಡಿತ ವ್ಯಕ್ತಿಗಳ ಗರ್ವ ಅಳಿಯಲಿ.
ಈ ಚರ್ಚೆ ಮುಂದುವರೆಯಲಿ, ನನ್ನ ತಪ್ಪುಗಳಿದ್ದರೆ ನಾನು ಮುಕ್ತವಾಗಿದ್ದೇನೆ. ಯಾರ ನೋಟದಲ್ಲಿ ರೋಗತುಂಬಿದೆಯೋ ಅವರಿಗೆ ಬಸವಣ್ಣನವರ ವಚನಗಳ ಬದುಕಿನ ಅರಿವಿನ ಬೆಳಕು ಆರೋಗ್ಯ ಕೊಡಲಿ.
ಶರಣು….
- ವೀರಣ್ಣ ಮಡಿವಾಳರ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ