ನಾನು ಬಿಜೆಪಿಯ ಪ್ರತೀಕಾರ ಮತ್ತು ಸೇಡಿನ ರಾಜಕೀಯಕ್ಕೆ ಬಲಿಯಾಗಿದ್ದೇನೆ: ಡಿಕೆಶಿ
ನಾನು ಬಿಜೆಪಿಯ ಪ್ರತೀಕಾರ ಮತ್ತು ಸೇಡಿನ ರಾಜಕೀಯಕ್ಕೆ ಬಲಿಯಾಗಿದ್ದೇನೆ. ಕಡೆಗೂ ನನ್ನನ್ನು ಬಂಧಿಸುವಲ್ಲಿ ಯಶಸ್ವಿಯಾದ ನನ್ನ ಬಿಜೆಪಿ ಸ್ನೇಹಿತರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು: ನಾನು ಬಿಜೆಪಿಯ ಪ್ರತೀಕಾರ ಮತ್ತು ಸೇಡಿನ ರಾಜಕೀಯಕ್ಕೆ ಬಲಿಯಾಗಿದ್ದೇನೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮನ್ನು ಮಂಗಳವಾರ ರಾತ್ರಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದೆಹಲಿಯಲ್ಲಿ ಬಂಧಿಸಿದ ಬೆನ್ನಲ್ಲೇ ಟ್ವೀಟ್ ಮಾಡಿರುವ ಡಿ.ಕೆ.ಶಿವಕುಮಾರ್ ಅವರು, "ನನ್ನ ವಿರುದ್ಧದ ಐಟಿ ಮತ್ತು ಇಡಿ ಪ್ರಕರಣಗಳು ರಾಜಕೀಯ ಪ್ರೇರಿತವಾಗಿದ್ದು, ನಾನು ಬಿಜೆಪಿಯ ಪ್ರತೀಕಾರ ಮತ್ತು ಸೇಡಿನ ರಾಜಕೀಯಕ್ಕೆ ಬಲಿಯಾಗಿದ್ದೇನೆ. ಕಡೆಗೂ ನನ್ನನ್ನು ಬಂಧಿಸುವಲ್ಲಿ ಯಶಸ್ವಿಯಾದ ನನ್ನ ಬಿಜೆಪಿ ಸ್ನೇಹಿತರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ" ಎಂದಿದ್ದಾರೆ.
ಇದೇ ವೇಳೆ, ಪಕ್ಷದ ಕಾರ್ಯಕರ್ತರಿಗೆ ಸಮಾಧಾನದಿಂದ ಇರುವಂತೆ ಮನವಿ ಮಾಡಿರುವ ಡಿಕೆ ಶಿವಕುಮಾರ್ ಅವರು, "ನಾನು ಕಾನೂನುಬಾಹಿರವಾಗಿ ಏನನ್ನೂ ಮಾಡದ ಕಾರಣ ಪಕ್ಷದ ಪದಾಧಿಕಾರಿಗಳು, ನನ್ನ ಬೆಂಬಲಿಗರು ಮತ್ತು ಹಿತೈಷಿಗಳು ನಿರಾಶೆಗೊಳ್ಳಬಾರದು. ನನಗೆ ದೇವರ ಮೇಲೆ ಮತ್ತು ನಮ್ಮ ದೇಶದ ನ್ಯಾಯಾಂಗದಲ್ಲಿ ಸಂಪೂರ್ಣ ನಂಬಿಕೆ ಇದೆ. ಈ ಹಗೆತನದ ರಾಜಕೀಯದ ವಿರುದ್ಧ ಕಾನೂನುಬದ್ಧವಾಗಿ ಮತ್ತು ರಾಜಕೀಯವಾಗಿ ನಾನು ವಿಜಯಶಾಲಿಯಾಗುತ್ತೇನೆ ಎಂಬ ವಿಶ್ವಾಸವಿದೆ" ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಮಂಗಳವಾರ ರಾತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ ಎಂಬ ಸುದ್ದಿ ಹಬ್ಬುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಇಡಿ ಕಚೇರಿಯ ಮುಂದೆ ಜಮಾಯಿಸಿದ ಡಿಕೆಶಿ ಬೆಂಬಲಿಗರು ಇಡಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ.