ಚನ್ನಪಟ್ಟಣ: ವಿರುಪಾಕ್ಷಿ ಪುರ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಅರಳಾಳುಸಂದ್ರದ ಶಾಲಾ ಆವರಣದಲ್ಲಿ ಸೋಮವಾರ ನಡೆದ 'ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು "ಜನರ ಸೇವೆ ಮಾಡಲು ಉಪಮುಖ್ಯಮಂತ್ರಿಯಾಗಿ ನಿಮ್ಮ ಮುಂದೆ ಬಂದಿದ್ದೇನೆ. ಜನಸೇವೆ ಮಾಡಲು ಮೊದಲು ಅವಕಾಶ ನೀಡಿದವರು ಚನ್ನಪಟ್ಟಣದ ಮತದಾರರು. ನಾನು ಜಾತಿ ನೋಡಿ ಜನಸೇವೆ ಮಾಡಿಲ್ಲ ನೀತಿ ನೋಡಿ ಕೆಲಸ ಮಾಡಿದ್ದೇನೆ" ಎಂದು ಹೇಳಿದರು.


COMMERCIAL BREAK
SCROLL TO CONTINUE READING

ನಿಮ್ಮ ಮನೆ ಬಾಗಿಲಿಗೆ ಅವಕಾಶ ಬಂದಿದೆ. ಯಾವುದೇ ಕಾರಣಕ್ಕೂ ಬಿಡಲು ಹೋಗಬೇಡಿ. ನಿಮ್ಮ ಮನೆ ಬಾಗಿಲಿಗೆ ಅಧಿಕಾರಿಗಳು, ಜನಪ್ರತಿನಿದಿಗಳು ಬಂದಿದ್ದಾರೆ. ನೀವು ನನ್ನ ಸೇವೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ನಿಮ್ಮ ಸೇವೆಗೆ ನನ್ನ ಕಚೇರಿ ಸದಾ ತೆರೆದಿರುತ್ತದೆ. ನನ್ನ ಕಚೇರಿಗೆ ಬಂದು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು" ಎಂದರು.


"ಈ ಹಿಂದೆ ಇಂಧನ ಸಚಿವನಾಗಿದ್ದಾಗ ರೈತರಿಗೆ ಟ್ರಾನ್ಸ್ಫಾರ್ಮರ್  ಅಳವಡಿಕೆ ಮತ್ತು ನೀರಾವರಿ  ಕೆಲಸಗಳನ್ನು ಮಾಡಿ ಅನುಕೂಲ ಮಾಡಿಕೊಡಲಾಗಿತ್ತು. ಕ್ಷೇತ್ರ ವಿಂಗಡಣೆಯಾಗಿ ನಾನು ಕನಕಪುರಕ್ಕೆ ಹೋದ ನಂತರ ಯಾರಾದರೂ ಶಾಸಕರು ಹೀಗೆ ಜನರ ಬಳಿಗೆ ಬಂದು ಕೆಲಸ ಮಾಡಿದ ಉದಾಹರಣೆಯೇ ಇಲ್ಲ. ದಳ, ಬಿಜೆಪಿ ಯಾವ ಪಕ್ಷದವರನ್ನು ಪ್ರಶ್ನೆ ಮಾಡಲು ಹೋಗುವುದಿಲ್ಲ" ಎಂದು ಹೇಳಿದರು.


ನಾನು ಯಾರ ಜೊತೆಗೂ ಸ್ಪರ್ಧಿಸಲು ಇಲ್ಲಿಗೆ ಬಂದಿಲ್ಲ ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಬಂದಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಮತ ನೀಡಿದ್ದೀರಿ ಅದಕ್ಕಾಗಿ ನಿಮಗೆ ಕೃತಜ್ಞತೆ ಸಲ್ಲಿಸಲು ಬಂದಿದ್ದೇನೆ. 80 ಸಾವಿರ ಮತಗಳನ್ನು ನೀಡಿದ ನಿಮಗೆ ಕೋಟಿ ನಮಸ್ಕಾರಗಳು" ಎಂದು ತಿಳಿಸಿದರು.


4,419 ಜನರ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ
5 ಜಿಲ್ಲಾ ಪಂಚಾಯತಿಗಳಲ್ಲಿ 4,419 ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಸುಮಾರು 1,996 ಜನ ಮನೆಯಿಲ್ಲ ಎಂದು ಅರ್ಜಿ ಸಲ್ಲಿಸಿದ್ದಾರೆ. 1,010 ಮಂದಿ ನಿವೇಶನವಿಲ್ಲ ಎಂದು ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರಿ ಜಮೀನು ಅಥವಾ ಖಾಸಗಿ ಜಮೀನು ಹುಡುಕಿ ಬಡವರಿಗೆ ನಿವೇಶನ ಹಂಚಿಕೆ ಮಾಡಲಾಗುವುದು. ಕಾಡಾನೆಗಳ ಹಾವಳಿ ತಪ್ಪಿಸಲು ಬನ್ನೇರುಘಟ್ಟದಿಂದ ಇಲ್ಲಿಯವರೆಗೆ 180 ಕಿಮೀ ಉದ್ದ ಬ್ಯಾರಿಕೆಡ್ ಅನ್ನು ಸುರೇಶ್ ಅವರ ಶ್ರಮದಿಂದ ಹಾಕಲಾಗುತ್ತಿದೆ. ಟಾಸ್ಕ್ ಫೋರ್ಸ್ ಸಿದ್ಧವಾಗಿದೆ" ಎಂದು ತಿಳಿಸಿದರು.


"ಗ್ಯಾರಂಟಿಗಳಿಂದ ಅತ್ತೆ ಸೊಸೆ ಜಗಳ ಆಗುತ್ತದೆ ಎಂದು ಸುಳ್ಳು ಹೇಳಿದರು. ಆದರೆ ಗ್ಯಾರಂಟಿಗಳಿಂದ ನಿಮ್ಮ ಬದುಕು ಬದಲಾವಣೆಯಾಗಿದೆ. ಒಂದೇ ಒಂದು ರೂಪಾಯಿ ಲಂಚ ಕೊಡದೆ ಐದು ಭಾಗ್ಯಗಳನ್ನು ಪಡೆಯುತ್ತಾ ಇದ್ದೀರಿ. ಅದೇ ರೀತಿ ತಾಲ್ಲೂಕು ಕಚೇರಿಯಲ್ಲಿ ಒಂದೇ ಒಂದು ರೂಪಾಯಿ ಲಂಚ ಕೊಡದೆ ಸರ್ವೇ, ಪಹಣಿ, ಪೋಡಿ ಕೆಲಸ ಮಾಡಿಕೊಡಿಸುವ ಜವಾಬ್ದಾರಿ ನನ್ನದು" ಎಂದು ಭರವಸೆ ನೀಡಿದರು.


"ಡಿ. ಕೆ.ಸುರೇಶ್ ಅವರಿಗೆ ಮತ ಹಾಕಿಲ್ಲ ಎಂದು ಮುಜುಗರ ಮಾಡಿಕೊಳ್ಳ ಬೇಡಿ. ನೀವು ನಮ್ಮ ಜಿಲ್ಲೆಯ ಜನ ನಿಮ್ಮ ಸಮಸ್ಯೆಗಳು ಬಗೆಹರಿಯಬೇಕು. ಪ್ರತಿ ಪಂಚಾಯತಿ ವ್ಯಾಪ್ತಿಯಲ್ಲಿ ನಮ್ಮ ಟ್ರಸ್ಟ್ ಹುಡುಗರು ನಿಮ್ಮ ಸಹಾಯಕ್ಕೆ ಇರುತ್ತಾರೆ" ಎಂದು ಹೇಳಿದರು.


"ಯಾರು ಬರಲಿ ಹೋಗಲಿ ನಿಮ್ಮ ಸಹಾಯಕ್ಕೆ ನಾನು ತಯಾರಿದ್ದೇನೆ. ನನ್ನ ಕರ್ತವ್ಯ ಮರೆಯುವ ಪ್ರಶ್ನೆಯೇ ಇಲ್ಲ. ನನ್ನನ್ನು ಅತ್ಯಂತ ಚಿಕ್ಕ ವಯಸ್ಸಿಗೆ ಶಾಸಕನನ್ನಾಗಿ ಮಾಡಿದವರು ನೀವು. 1985 ರಿಂದ 2008 ರ ತನಕ ನಿಮ್ಮ ಸೇವೆ ಮಾಡಿದ್ದೇನೆ, ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇನೆ" ಎಂದರು.


ಕಾರ್ಯಕ್ರಮಕ್ಕೆ ಮುಂಚಿತವಾಗಿ ಗರಕನಹಳ್ಳಿ ಏತ ನೀರಾವರಿ ಯೋಜನೆಯ ಉನ್ನತೀಕರಣ ಮತ್ತು ಕೋಡಂಬಳ್ಳಿ ಏರು ಕೊಳವೆ ಶಾಖೆಯ ಸಾಮರ್ಥ್ಯ ವೃದ್ಧಿಗಾಗಿ 40 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದರು.


ಜನರ ಮನವಿಗಳನ್ನು ಸ್ವೀಕರಿಸಿದ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಡಿಸಿಎಂ ಅವರು ಕಾರ್ಯಕ್ರಮದಲ್ಲಿ ತೆಗೆದುಕೊಂಡ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತಿದೆಯೇ ಎಂದಾಗ  "ಜನರ ಕಷ್ಟಗಳಿಗೆ ಮಾಧ್ಯಮಗಳ ಕಣ್ಣುಗಳೇ ಸಾಕ್ಷಿ. ಈಗಾಗಲೇ 5 ಸಭೆಗಳನ್ನು ನಡೆಸಲಾಗಿದೆ. ಇನ್ನೂ 4 ಸಭೆಗಳನ್ನು ನಡೆಸಲಾಗುವುದು. ಜನರು ತಮ್ಮ ಸಮಸ್ಯೆಗಳು ಬಗೆಹರಿಯುತ್ತಿರುವ ಕಾರಣಕ್ಕೆ ಮನವಿ ಸಲ್ಲಿಕೆ ಮಾಡುತ್ತಾ ಇರುವುದು" ಎಂದು ಹೇಳಿದರು.


"ಪಿಂಚಣಿ ಬರುತ್ತಿಲ್ಲ ಎಂದು ಅರ್ಜಿ ಸಲ್ಲಿಸಿದ್ದ 69 ಜನರಿಗೆ ಸಂಧ್ಯಾ ಸುರಕ್ಷಾ ಯೋಜನೆಯ ಅಡಿ ಹಣ ಬರುವಂತೆ ಮಾಡಲಾಗಿದೆ. ಫಲನುಭವಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಗುವುದು" ಎಂದು ತಿಳಿಸಿದರು.


ಮಾವಿನ ಬೆಳೆ ನಷ್ಟವಾಗಿದೆ ಸರ್ಕಾರದಿಂದ ಪರಿಹಾರ ನೀಡುವ ಉದ್ದೇಶವಿದೆಯೇ ಎಂದು ಕೇಳಿದಾಗ "ಕೇಂದ್ರ ಸರ್ಕಾರ ನಾವು ಕೇಳಿದಷ್ಟು ಬರ ಪರಿಹಾರ ಕೊಡಲಿಲ್ಲ. ಈಗಾಗಲೇ ಒಂದಷ್ಟು ಪರಿಹಾರವನ್ನು ರೈತರ ಖಾತೆಗೆ ಹಾಕಲಾಗಿದೆ. ಇನ್ನೂ ಹೆಚ್ಚಿನ ಪರಿಹಾರಕ್ಕೆ ಕ್ರಮ ವಹಿಸಲಾಗುವುದು" ಎಂದರು.


ಕ್ಷೇತ್ರದ ಯಾವ ಯೋಜನೆಗಳಿಗೆ ವಿಶೇಷ ಅನುದಾನ ತರಲಾಗುವುದು ಎಂದಾಗ "ಗ್ರಾಮ ಪಂಚಾಯತಿವಾರು ಸಮಸ್ಯೆಗಳನ್ನು ಪಟ್ಟಿ ಮಾಡಿ ಅದರಂತೆ ಮುಖ್ಯಮಂತ್ರಿಗಳ ಬಳಿ ವಿಶೇಷ ಅನುದಾನಕ್ಕೆ ಮನವಿ ಸಲ್ಲಿಸಲಾಗುವುದು" ಎಂದು ಹೇಳಿದರು.


ಪ್ರಧಾನಿಯವರ ಭೇಟಿ ವೇಳೆ ಹೊಸ ನೀರಾವರಿ ಯೋಜನೆಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಯಿತೇ ಎಂದು ಕೇಳಿದಾಗ "ಈಗ ಬಾಕಿ ಇರುವ ಯೋಜನೆಗಳಿಗೆ ಅನುಮತಿ ನೀಡಿ ಹಾಗೂ ಭದ್ರ, ಮೇಕೆದಾಟು, ಮಹದಾಯಿ ಯೋಜನೆಗಳಿಗೆ ಮೀಸಲಿಟ್ಟ ಹಣವನ್ನು ಕೊಡಿ ಎಂದು ಮನವಿ ಮಾಡಲಾಯಿತು" ಎಂದು ಉತ್ತರಿಸಿದರು.


ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗೆ ಕೇಂದ್ರ ಕೈಗಾರಿಕಾ ಸಚಿವರ ಬಳಿ ಸರ್ಕಾರ ಮಾತುಕತೆ ನಡೆಸಲಾಗುವುದೇ ಎಂದಾಗ "ಅವಕಾಶ ಸಿಕ್ಕಿದೆಯಲ್ಲ ಈಗ ಅವರು ಕೆಲಸ ಮಾಡಲಿ. ಯಾವ ಯೋಜನೆಗಳನ್ನು ರಾಜ್ಯಕ್ಕೆ ತಂದರು ನಾವು ಸಹಕಾರ ನೀಡಲು ಬದ್ಧವಾಗಿದ್ದೇವೆ" ಎಂದು ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.