ನಾನು ಯಾವಾಗಬೇಕಾದರೂ ತೀರ್ಪು ನೀಡಬಹುದು: ಸ್ಪೀಕರ್ ಕೋಳಿವಾಡ
ನನಗೆ ಎಲ್ಲಾ ವಿಚಾರಗಳ ಬಗ್ಗೆ ತೃಪ್ತಿ ಆದ ಬಳಿಕವಷ್ಟೇ ತೀರ್ಪು ನೀಡುತ್ತೇನೆ ಎಂದು ಕೋಳಿವಾಡ ಹೇಳಿದ್ದಾರೆ.
ಬೆಂಗಳೂರು: ಜೆಡಿಎಸ್ ಶಾಸಕರ ಅನರ್ಹತೆ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪೀಕರ್ ಕೋಳಿವಾಡ ಅವರನ್ನು ಅಡ್ವೋಕೆಟ್ ಜನರಲ್ ಎ.ಎ.ಮಧುಸೂದನ್ ಭೇಟಿ ಮಾಡಿ ಚರ್ಚೆ ನಡೆಸಿದರು.
ಜೆಡಿಎಸ್‌ನ ಏಳು ಬಂಡಾಯ ಶಾಸಕರ ಅನರ್ಹತೆ ಸಂಬಂಧ ಕಾಯ್ದಿರಿಸಿರುವ ತೀರ್ಪನ್ನು ಇದೇ 22ರ ಮಧ್ಯಾಹ್ನದೊಳಗೆ ಪ್ರಕಟಿಸಲು ಸಾಧ್ಯವೇ ಅಥವಾ ಇಲ್ಲವೇ ಎಂಬುದನ್ನು ಬುಧವಾರದ (ಮಾ.21) ಒಳಗೆ ತಿಳಿಸುವಂತೆ ಸ್ಪೀಕರ್ ಕಚೇರಿಗೆ ಹೈಕೋರ್ಟ್ ಸೂಚಿಸಿತ್ತು. ಈ ಸಂಬಂಧ ಹೈಕೋರ್ಟ್ ಸೂಚನೆ ಮೇರೆಗೆ ಅಡ್ವೋಕೇಟ್ ಜನರಲ್ ಮಧುಸೂಧನ್ ಇಂದು ಕೋಳಿವಾಡ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಈ ಪ್ರಕರಣ ಸಂಬಂಧ ನಾನು ಯಾವಾಗ ಬೇಕಾದರೂ ತೀರ್ಪು ನೀಡಬಹುದು. ಸಂವಿಧಾನದ 10ನೇ ಶೆಡ್ಯೂಲ್ ಪ್ರಕಾರ, ಯಾವುದೇ ನ್ಯಾಯಾಲಯ ಸ್ಪೀಕರ್ ವ್ಯಾಪ್ತಿಯಲ್ಲಿ ಕೋರ್ಟ್ ಮಧ್ಯಪ್ರವೇಶಕ್ಕೆ ಅವಕಾಶ ಇಲ್ಲ. ಜೆಡಿಎಸ್ ಶಾಸಕ ನಿಂಗಯ್ಯ ಬೇಗ ತೀರ್ಪು ನೀಡುವಂತೆ ಮನವಿ ಮಾಡಿದ್ದಾರೆ ಅಷ್ಟೇ. ಆದರೆ ನನಗೆ ಎಲ್ಲಾ ವಿಚಾರಗಳ ಬಗ್ಗೆ ತೃಪ್ತಿ ಆದ ಬಳಿಕವಷ್ಟೇ ತೀರ್ಪು ನೀಡುತ್ತೇನೆ ಎಂದು ಕೋಳಿವಾಡ ಹೇಳಿದ್ದಾರೆ.