ಬೆಂಗಳೂರು: ಅಧಿಕಾರದ ಆಸೆಗಾಗಿ ಬೇರೆ ಪಕ್ಷದಿಂದ ಕಾಂಗ್ರೆಸ್​ಗೆ ಬಂದು ಮೂಲ ಕಾಂಗ್ರೆಸಿಗರನ್ನು ಮೂಲೆಗುಂಪು ಮಾಡಿ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ಏರಿದರು ಎಂದು ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ಮಾಡಿದ್ದ ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಂಟಿಬಿ ನಾಗರಾಜ್ ಟೀಕೆಗೆ ನಾನು ಹೆಚ್ಚಿನ ಮಹತ್ವ ನೀಡಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಸಿದ್ದರಾಮಯ್ಯ, ಎಂಟಿಬಿ ನಾಗರಾಜ್ ಟೀಕೆಗೆ ನಾನು ಹೆಚ್ಚಿನ ಮಹತ್ವ ನೀಡುವುದಿಲ್ಲ. ಒಂದು ಸಾರಿ ನಾನು ಹೃದಯದಲ್ಲಿ ಇದ್ದೀನಿ ಎನ್ನುತ್ತಾರೆ, ಆಮೇಲೆ ನನ್ನನ್ನೇ ಟೀಕೆ ಮಾಡುತ್ತಾರೆ. ನನ್ನ ಜೊತೆಯಲ್ಲೇ ಇದ್ದು ನನಗೆ ದ್ರೋಹ ಮಾಡಿದ್ದಾರೆ. ಇಂಥವರ ನಾಟಕಗಳಿಗೆ ಜನರೇ ಉತ್ತರ ಕೊಡುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಹೇಳಿದ್ದಾರೆ.



ಇತ್ತೀಚೆಗೆ ಸಿದ್ದರಾಮಯ್ಯ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದ ಮಾಜಿ ಸಚಿವ ಎಂಟಿಬಿ ನಾಗರಾಜ್ “ಅಧಿಕಾರದ ಆಸೆಗಾಗಿ ಬೇರೆ ಪಕ್ಷದಿಂದ ಕಾಂಗ್ರೆಸ್​ಗೆ ಬಂದು ಮೂಲ ಕಾಂಗ್ರೆಸಿಗರನ್ನು ಮೂಲೆಗುಂಪು ಮಾಡಿ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ಏರಿದರು, ಅಧಿಕಾರ ಅನುಭವಿಸಿದರು. ಆದರೆ, ಪಕ್ಷವನ್ನು ಪ್ರಾಮಾಣಿಕವಾಗಿ ಕಟ್ಟಿ ಬೆಳೆಸಿದವರು ನಾವು ನಮ್ಮ ಮನೆಯಲ್ಲಿ ಬೇರೆಯವರು ವಾಸವಾಗಿದ್ದಾರೆ” ಎಂಬರ್ಥದಲ್ಲಿ ಟೀಕೆ ಮಾಡಿದ್ದರು. 


ದಶಕಗಳಿಂದ ಸಿದ್ದರಾಮಯ್ಯ ಅವರ ಬಂಟನಂತೆ ಜೊತೆಗಿದ್ದ, ನನ್ನ ಎದೆ ಬಗೆದು ನೋಡಿದರೆ ಸಿದ್ದರಾಮಯ್ಯ ಅವರೇ ಕಾಣುತ್ತಾರೆ ಎನ್ನುತ್ತಿದ್ದ ಎಂಟಿಬಿ ನಾಗರಾಜ್ ಅವರ ಈ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.