ಬೆಂಗಳೂರು: ಈ ಬಾರಿಯ ಸಮ್ಮಿಶ್ರ ಸರ್ಕಾರದ ಬಜೆಟ್'ನಲ್ಲಿ ಘೋಷಿಸಿದ ಸಾಲ ಮನ್ನಾದಿಂದ ಒಕ್ಕಲಿಗರಿಗೆ ಶೇ.32ರಷ್ಟು ಪ್ರಯೋಜನವಾಗಿದೆ ಎಂಬ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು, ಈ ಬಗ್ಗೆ ಲೆಕ್ಕಾಚಾರ ಹಾಕಿದವರ್ಯಾರು? ಎಂದು ಕಿಡಿ ಕಾರಿದ್ದಾರೆ. 


COMMERCIAL BREAK
SCROLL TO CONTINUE READING

ಬೆಂಗಳೂರು ಪ್ರೆಸ್ ಕ್ಲಬ್'ನಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ಶನಿವಾರ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಲ ಮನ್ನಾ ಲಾಭದ ಲೆಕ್ಕಚಾರ ಹಾಕಿದ್ದು ಯಾರು..? ಮಂಗಳೂರು, ಬೀದರ್​ನಲ್ಲಿ ಒಕ್ಕಲಿಗರು ಇದ್ದಾರಾ? ಎಂದು ಖಾರವಾಗಿ ಪ್ರಶ್ನಿಸಿದರಲ್ಲದೆ, ಬಜೆಟ್ ಬಗ್ಗೆ ಯಾರು ಏನೇ ಪ್ರಶ್ನೆ ಕೇಳುವುದಿದ್ದರೂ ಸದನದಲ್ಲಿ ಕೇಳಲಿ, ಅದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಸದನದಲ್ಲಿ ಉತ್ತರ ಕೊಡುತ್ತಾರೆ ಎಂದು ಹೇಳಿದರು.


ಮುಂದುವರೆದು ಮಾತನಾಡಿದ ಅವರು, ಪತ್ರಿಕಾರಂಗದಲ್ಲಿ ನಿರ್ಭಯವಾಗಿ ಕೆಲಸ ಮಾಡುವುದು ಕಷ್ಟ ಎಂದು ಎಲ್ಲರೂ ಹೇಳುತ್ತಾರೆ. ಕೆಲವೊಮ್ಮೆ ಪತ್ರಕರ್ತರು ಏಟು ತಿಂದ ಸಂದರ್ಭಗಳೂ ಇವೆ. ನನಗೆ ರಾಜ್ಯ ಹಾಗೂ ದೆಹಲಿ ಎರಡರ ಅನುಭವವೂ ಇದೆ. 1962 ರಲ್ಲಿ ವಿಧಾನಸಭೆಗೆ ಪ್ರವೇಶ ಮಾಡಿದ್ದೆ. ಯಾವ ದಿನ ನನ್ನ ನೋವು ಮರೆಯುತ್ತೇನೆ ಅನ್ನೋದನ್ನು ನಿಮಗೆ ತಿಳಿಸಿ ಅಂದು ಮಾತನಾಡುತ್ತೇನೆ. ನಾನು ಸದ್ಯ ಯಾವುದೇ ರಾಜಕೀಯ ವಿಷಯ ಕುರಿತು ಮಾತನಾಡಲ್ಲ. ಸಂದರ್ಭ ಬಂದಾಗ ಮೌನ ಮುರಿಯುತ್ತೇನೆ ಎಂದರು.


ಸಾಹಿತಿ ಬರಗೂರು ರಾಮಚಂದ್ರಪ್ಪ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.