ಬೆಂಗಳೂರು: ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಏಕೈಕ ಉದ್ದೇಶದಿಂದ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವಂತೆ ಹೈಕಮಾಂಡ್ ಸೂಚಿಸಿತ್ತು. ಹೈಕಮಾಂಡ್ ಆದೇಶವನ್ನು ನಾನು ಪಾಲಿಸಿದೆ. ಇದರಲ್ಲಿ ನನ್ನ ಪಾತ್ರ ಇಷ್ಟೆ. ಹೈಕಮಾಂಡ್ ಜೊತೆ ಚರ್ಚಿಸಿದ್ದು, ಸರ್ಕಾರ ರಚಿಸಿದ್ದು ದೇವೇಗೌಡರು. ನಾನು ಯಾರ ಮುಖ್ಯಮಂತ್ರಿ ಪಟ್ಟವನ್ನು ತಪ್ಪಿಸಿಲ್ಲ ಎಂದು ಸಾಮಾಜಿಕ ಜಾಲತಾಣದ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಉಪಚುನಾವಣೆ ಬಗ್ಗೆ ವಿಜಯಪುರದಲ್ಲಿಂದು ಮಾಧ್ಯಮ ಹೇಳಿಕೆ ನೀಡಿರುವ ಸಿದ್ದರಾಮಯ್ಯ, ಪ್ರಸ್ತುತ ನಡೆಯಲಿರುವ ಉಪಚುನಾವಣೆಗೆ ಉಳಿದ 7 ಕ್ಷೇತ್ರಗಳ ಅಭ್ಯರ್ಥಿಗಳ‌ ಆಯ್ಕೆಗೆ ಸಂಬಂಧಿಸಿದಂತೆ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದ ಸಿದ್ದರಾಮಯ್ಯ, ನಂತರ ಹೈಕಮಾಂಡ್ ಜೊತೆ ಚರ್ಚಿಸಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ನಮ್ಮ‌ ಗುರಿ ಕನಿಷ್ಠ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು. 15 ಸ್ಥಾನ ಗೆದ್ದರೂ ಆಶ್ಚರ್ಯವಿಲ್ಲ ಎಂದರು.


ಉಪಚುನಾವಣೆ ನಂತರ ಕಾಂಗ್ರೆಸ್ ಮತ್ತು ಜೆಡಿಸ್ ಪಕ್ಷದಿಂದ ಇನ್ನಷ್ಟು ಜನ ನಮ್ಮ ಪಕ್ಷಕ್ಕೆ ಬರುತ್ತಾರೆಂದು ಬಿಜೆಪಿಯವರು ಹೇಳಿದ್ದಾರಂತೆ, ಮೊದಲು ಬಿಜೆಪಿ ಬಿಟ್ಟು ಹೋಗುತ್ತಿರುವವರನ್ನು ತಡೆಯಲಿ, ಆಮೇಲೆ ಬೇರೆ ಮಾತು ಎಂದು ಬೆಜೆಪಿಗೆ ತಿರುಗೇಟು ನೀಡಿದ್ದಾರೆ. 


ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಹೇಳಿಕೆಗಳನ್ನು ಕೇಳಿ ಕೇಳಿ ಸಾಕಾಗಿದೆ ಎಂದ ಸಿದ್ದರಾಮಯ್ಯ, ನಾವಾಗಿಯೇ ಹಣ, ಅಧಿಕಾರದ ಆಮಿಷ ಒಡ್ಡಿ ಬೇರೆ ಪಕ್ಷದವರನ್ನು ನಮ್ಮ‌ ಪಕ್ಷಕ್ಕೆ ಕರೆತಂದರೆ ಅದು ಆಪರೇಷನ್ ಆಗುತ್ತದೆ. ಆದರೆ ನಮ್ಮ‌ ಪಕ್ಷದ ಸಿದ್ಧಾಂತವನ್ನು ಒಪ್ಪಿ ಅವರಾಗಿಯೇ ಬಂದರೆ ಅದು ಆಪರೇಷನ್ ಹೇಗಾಗುತ್ತದೆ? ಈ ಆಪರೇಷನ್, ಸರ್ಜರಿ ಇದರಲ್ಲಿ ಸಿಎಂ @BSYBJP ಅವರೇ ಸ್ಪೆಷಲಿಸ್ಟ್. ನಾನು ಡಾಕ್ಟರೂ ಅಲ್ಲ, ನನಗೆ ಯಾವ ರೋಗಿಗಳು ಗೊತ್ತಿಲ್ಲ ಎಂದು ಆಪರೇಷನ್ ಕಮಲದ ವಿರುದ್ಧ ಹರಿಹೈದರು.


ಬಿಜೆಪಿಯವರ ಬಳಿ ಹಣವಿದೆ, ಅಧಿಕಾರ ಹಿಡಿಯಲು ಆಪರೇಷನ್ ಕಮಲವನ್ನೂ ಮಾಡ್ತಾರೆ. ಅನೈತಿಕ ರಾಜಕಾರಣವನ್ನೂ ಮಾಡ್ತಾರೆ. ಮೌಲ್ಯಾಧಾರಿತ ರಾಜಕಾರಣ ಅಂದ್ರೆ ಏನು ಅಂತಲೇ ಅವರಿಗೆ ಗೊತ್ತಿಲ್ಲ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಸ್ವಲ್ಪವೂ ಗೌರವವಿಲ್ಲ. ಹಿಂಬಾಗಿಲ ರಾಜಕಾರಣಕ್ಕೆ ಬಿಜೆಪಿಯವರು ಹೆಸರುವಾಸಿ ಎಂದು ಕಿಡಿಕಾರಿದರು.