ಮೈಸೂರು: ಐದು ವರ್ಷಗಳ ಹಿಂದೆ ಬಸವಣ್ಣನವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಅಧಿಕಾರಕ್ಕೆ ಬಂದಿದ್ದೆ. ಈ ಬಾರಿಯೂ ಬಸವ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದ್ದೇನೆ. ಮುಂದಿನ ಬಾರಿಯೂ ನಾನೇ ಬಸವ ಪುತ್ಥಳಿಗೆ ಪುಷ್ಪಾರ್ಚನೆ ಮಾಡುತ್ತೇನೆ. ನಾನೇ ಮುಂದಿನ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಬಸವ ಜಯಂತಿ ಪ್ರಯುಕ್ತ ಗನ್ ಹೌಸ್ ಬಳಿಯಿರುವ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಸಿದ್ದರಾಮಯ್ಯ, ನಾನು ಬಸವಣ್ಣನವರ ಹುಟ್ಟು ಅನುಯಾಯಿ, ಹನ್ನೆರಡನೇ ಶತಮಾನದಲ್ಲಿಯೇ ಸಾಮಾಜಿಕ ನ್ಯಾಯದ ಸಿದ್ಧಾಂತವನ್ನು ಪ್ರತಿಪಾದಿಸಿದ ಬಸವಣ್ಣನವರು ವೈಯಕ್ತಿಕವಾಗಿ ಮತ್ತು ರಾಜಕೀಯವಾಗಿ ನನಗೆ ವೈಚಾರಿಕ ಗುರು ಎಂದು ಹೇಳಿದರು.


"ಬಸವಣ್ಣನ ಜಯಂತಿಯ ದಿನವೇ ನಾನು ಈ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದೆ. ಈ ನಿರ್ಧಾರ ಕಾಕತಾಳೀಯವಲ್ಲ, ಉದ್ದೇಶಪೂರ್ವಕವಾದುದು. ಆ ದಿನ ಬಸವಣ್ಣನವರ ಚಿಂತನೆಗಳ ಹಾದಿಯಲ್ಲಿ ನಡೆಯುತ್ತೇನೆ ಎಂದು ನನ್ನ ಮನಸ್ಸಿನೊಳಗೆ ಪ್ರಮಾಣ ಮಾಡಿದ್ದೆ. ಅದರಂತೆ ಬಸವಣ್ಣನವರ ತತ್ವದ ದಾರಿಯಲ್ಲಿಯೇ ನಮ್ಮ ಸರ್ಕಾರ ಸಾಗುತ್ತಿದೆ. ಈ ಜಾಗೃತಿ ನಮ್ಮ ಸರ್ಕಾರದ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಇರಬೇಕೆಂಬ ಉದ್ದೇಶದಿಂದಲೇ ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಕಡ್ಡಾಯವಾಗಿ ಹಾಕಬೇಕೆಂದು ಆದೇಶಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.



ಅಷ್ಟೇ ಅಲ್ಲದೆ, ಬಸವಣ್ಣನವರ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಬಸವಣ್ಣನವರ ಅನ್ನದಾಸೋಹದ ಸಂದೇಶಕ್ಕೆ ಅನುಗುಣವಾಗಿ ಮುಖ್ಯಮಂತ್ರಿಯಾದ ಮರುಗಳಿಗೆಯಲ್ಲಿಯೇ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆ. ಈ ಮೂಲಕ ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ಸಂಕಲ್ಪ ಕೈಗೊಂಡೆ. ವಿದ್ಯಾರ್ಥಿಗಳಿಗೆ ಬಿಸಿಯೂಟ, ಕ್ಷೀರಭಾಗ್ಯದ ಮೂಲಕ ಹಾಲು, ಇಂದಿರಾ ಕ್ಯಾಂಟೀನ್, ಗರ್ಭಿಣಿ ಮತ್ತು ಬಾಣಂತಿಯರಿಗಾಗಿ ಮಾತೃಪೂರ್ಣ ಯೋಜನೆಗಳು ಬಸವಣ್ಣನವರ ಅನ್ನದಾಸೋಹದ ಚಿಂತನೆಯಿಂದಲೇ ಪ್ರೇರಿತವಾದುದು ಎಂದು ಹೇಳಿದ್ದಾರೆ.



ಬಸವಣ್ಣನವರ ಜ್ಞಾನದಾಸೋಹ ಕೂಡಾ ನಮ್ಮ ಸರ್ಕಾರದ ಕಾರ್ಯಕ್ರಮದ ಭಾಗವಾಗಿದೆ. ಮಕ್ಕಳಿಗೆ ಹಾಲು-ಅನ್ನದ ಜತೆಯಲ್ಲಿ 61 ಲಕ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕ,ಸಮವಸ್ತ್ರ,ಶೂ ಮತ್ತು ಸಾಕ್ಸ್ ನೀಡಲಾಗುತ್ತಿದೆ. ಕಳೆದ ಐದುವರ್ಷಗಳಲ್ಲಿ ಸುಮಾರು 8000 ಪ್ರಾಥಮಿಕ ಮತ್ತು 1700 ಹೈಸ್ಕೂಲ್ ಶಿಕ್ಷಕಕರನ್ನು ನೇಮಕಮಾಡಲಾಗಿದೆ. ಇದರ ಜತೆ ಹಾಸ್ಟೆಲ್ ಸೌಲಭ್ಯ ವಂಚಿತರಿಗೆ ವಿದ್ಯಾಸಿರಿ’, ವಿದೇಶದಲ್ಲಿ ವ್ಯಾಸಂಗಕ್ಕೆ ವಿದ್ಯಾರ್ಥಿವೇತನ, ವಿದ್ಯಾರ್ಥಿನಿಯರಿಗೆ ಒಂದನೇ ತರಗತಿಯಿಂದ ಹಿಡಿದು ಸ್ನಾತಕೋತ್ತರ ವ್ಯಾಸಂಗದವರೆಗೆ ಉಚಿತ ಶಿಕ್ಷಣ- ಇವೆಲ್ಲವೂ ನಮ್ಮ ಸರ್ಕಾರ ಜ್ಞಾನದಾಸೋಹಕ್ಕೆ ನೀಡಿರುವ ಮಹತ್ವವನ್ನು ಸಾರುತ್ತದೆ. ಅಣ್ಣನ ವೈಚಾರಿಕ ಜಾಗೃತಿಯ ಆಶಯಕ್ಕೆ ಅನುಗುಣವಾಗಿಯೇ ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದೇವೆ.



ಕನ್ನಡ ಭಾಷೆಯ ಬಗೆಗಿನ ನಮ್ಮ ಸರ್ಕಾರದ ಬದ್ಧತೆಗೂ ಬಸವಣ್ಣನೇ ಪ್ರೇರಕ ಶಕ್ತಿ. ಬಸವಣ್ಣನವರು ಕನ್ನಡವನ್ನು ಅಂದಿನ ಧರ್ಮದ ಭಾಷೆಯಾಗಿ, ವಿಚಾರದ ಭಾಷೆಯಾಗಿ, ಸಂವಹನದ ಭಾಷೆಯಾಗಿ ಬಳಸಿಕೊಳ್ಳುವ ಮೂಲಕ ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಬೆಲೆ ಕಟ್ಟಲಾಗದ್ದು. ಹಾಗೆ ನೋಡಿದರೆ ಕನ್ನಡ ಮಾಧ್ಯಮ ಪರಿಣಾಮಕಾರಿಯಾಗಿ ಜಾರಿಗೆ ಬಂದದ್ದೇ ಹನ್ನೆರಡನೇ ಶತಮಾನದಲ್ಲಿ ಎನ್ನುವುದು ಆಶ್ಚರ್ಯದ ಸಂಗತಿಯಾದರೂ ಅದು ವಾಸ್ತವ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.


ಬಸವಣ್ಣನ ಜಯಂತಿಯ ದಿನ ನಾವೆಲ್ಲರೂ ಮತ್ತೊಮ್ಮೆ ಬಸವಣ್ಣನವರ ತತ್ವ-ಸಿದ್ಧಾಂತದ ಮನನ ಮಾಡಿಕೊಳ್ಳೋಣ, ಬಸವಣ್ಣ ನುಡಿದಂತೆ ನಾವು ನಡೆಯೋಣ. ಸಮಸಮಾಜ ನಿರ್ಮಾಣದ ಬಗ್ಗೆ ಬಸವಣ್ಣ ಕಂಡ ಕನಸನ್ನು ಸಾಕಾರಗೊಳಿಸಲು ಒಂದಾಗಿ ಕೈಜೋಡಿಸೋಣ ಎಂದು ಸಿದ್ದರಾಮಯ್ಯ ಕರೆ ನೀಡಿದ್ದಾರೆ.