ಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ ಮಂಡ್ಯದಿಂದ ಮಾತ್ರ: ಸುಮಲತಾ ಅಂಬರೀಶ್
ನಾನು ಸ್ಪರ್ಧೆ ಮಾಡುವುದಾದರೆ ಮಂಡ್ಯದಿಂದ ಮಾತ್ರ. ನಾನು ಯಾವುದೇ ದುರಾಸೆಯಿಂದ ರಾಜಕಾರಣಕ್ಕೆ ಬರುತ್ತಿಲ್ಲ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.
ಮಂಡ್ಯ: ಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ ಮಂಡ್ಯ ಕ್ಷೇತ್ರದಿಂದ ಮಾತ್ರ ಸ್ಪರ್ಧಿಸುವೆ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.
ಇಂದು ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಸುಮಲತಾ ಅಂಬರೀಶ್ ಅವರು, ಕಾಂಗ್ರೆಸ್ ಮುಖಂಡರೊಂದಿಗೆ ಚರ್ಚೆ ನಡೆಸಿ ಚುನಾವಣೆ ಬಗ್ಗೆ ಅವರ ಅಭಿಪ್ರಾಯ ಹಂಚಿಕೊಂಡರು.
ಈ ಸಂದರ್ಭದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸುಮಲತಾ "ನಾನು ಸ್ಪರ್ಧೆ ಮಾಡುವುದಾದರೆ ಮಂಡ್ಯದಿಂದ ಮಾತ್ರ. ನಾನು ಯಾವುದೇ ದುರಾಸೆಯಿಂದ ರಾಜಕಾರಣಕ್ಕೆ ಬರುತ್ತಿಲ್ಲ. ದುರಾಸೆಯಿದ್ದರೆ ಅಂಬರೀಷ್ ಏನೇನೋ ಮಾಡುತ್ತಿದ್ದರು. ಮಂಡ್ಯದ ಜನರ ಋಣ ತೀರಿಸಲು ನಾನು ನನ್ನ ಮಗ ಬಂದಿದ್ದೇವೆ. ಅಂಬರೀಶ್ ಅವರನ್ನು ಎರಡು ಬಾರಿ ಸಚಿವರಾಗಿ, ಸಂಸದರನ್ನಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಹಾಗಾಗಿ ನಮಗೆ ಕಾಂಗ್ರೆಸ್ ಪಕ್ಷದ ಮೇಲೆ ನೀಯತ್ತಿದೆ" ಎಂದು ಹೇಳುವ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಕಾಂಗ್ರೆಸ್ ಪಕ್ಷದಿಂದಲೇ, ಮಂದ್ಯದಿಂದಲೇ ಸ್ಪರ್ಧಿಸುವುದಾಗಿ ಸುಮಲತಾ ಹೇಳಿದರು.
ಈ ಹಿಂದೆ ಸುಮಲತಾ ಅಂಬರೀಶ್ ಅವರು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರಿತ ಜೆಡಿಎಸ್ ತಮ್ಮ ಪಕ್ಷಕ್ಕೆ ಸುಮಲತಾ ಅವರಿಗೆ ಆಹ್ವಾನ ನೀಡಿತ್ತು. ಒಂದು ವೇಳೆ ಸುಮಲತಾ ಅವರು ಜೆಡಿಎಸ್ ಪಕ್ಷಕ್ಕೆ ಸೇರಲು ಬಯಸುವುದಾದರೆ ಅವರಿಗೆ ಸ್ವಾಗತ ಎಂದು ಜೆಡಿಎಸ್ ಹೇಳಿತ್ತು. ಆದರೆ ಇಂದಿನ ಬೆಳವಣಿಗೆಯಿಂದಾಗಿ ಸುಮಲತಾ ಅವರು ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧಿಸಲು ಇಚ್ಚಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ.