ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆ ಸಚಿವ ಸ್ಥಾನವನ್ನು ಶಾಸಕ ಜಿ.ಟಿ ದೇವೇಗೌಡ ನಿರಾಕರಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಆ ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವುದಾಗಿ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಇಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಉನ್ನತ ಶಿಕ್ಷಣ ಇಲಾಖೆ ಸಭೆಯಿತು. ಆದರೆ ಈ ಸಭೆಗೆ ಜಿ.ಟಿ.ದೇವೇಗೌಡರು ಪಾಲ್ಗೊಂಡಿರಲಿಲ್ಲ. ಈ ಬಗ್ಗೆ ಸಿಎಂ ಕುಮಾರಸ್ವಾಮಿ ಅವರನ್ನು "ಉನ್ನತ ಶಿಕ್ಷಣ ಖಾತೆಯನ್ನು ಜಿ.ಟಿ.ದೇವೇಗೌಡರು ನಿರಾಕರಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆಯಲ್ಲಾ?" ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಹೌದು, ಈಗ ಆ ಖಾತೆ ನನ್ನ ಬಳಿಯೇ ಇದೆ. ಸದ್ಯ ನಾನೇ ಆ ಖಾತೆ ನಿಭಾಯಿಸುತ್ತೇನೆ. ಜಿ.ಟಿ.ದೇವೇಗೌಡರಿಗೆ ಯಾವ ಖಾತೆ ನೀಡಬೇಕು ಎಂಬುದನ್ನು ಮುಂದಿನ ದಿನಗಳಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಹೇಳಿದರು.


ಈಗಾಗಲೇ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಭಿನ್ನಮತ ಶಮನಕ್ಕೆ ಪ್ರಯತ್ನಿಸಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ, ಜೂನ್ 17ರಂದು ಎರಡನೇ ಹಂತದ ಸಂಪುಟ ವಿಸ್ತರಣೆ ಸಂಬಂಧ ಸಭೆ ನಡೆಸಲಿದೆ ಎನ್ನಲಾಗಿದೆ. ಈಗಾಗಲೇ 25 ಖಾತೆಗಳ ಹಂಚಿಕೆ ಮಾಡಲಾಗಿದ್ದು, ಉಳಿದಿರುವ 7 ಖಾತೆಗಳಲ್ಲಿ ಜೆಡಿಎಸ್ ಪಕ್ಷಕ್ಕೆ 1 ಮತ್ತು ಕಾಂಗ್ರೆಸ್ ಪಕ್ಷಕ್ಕೆ 6 ಸಚಿವ ಸ್ಥಾನಗಳ ಹಂಚಿಕೆ ಆಗಬೇಕಿದೆ. 


ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಚುನಾವಣೆಯಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿದ್ದ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ ಅವರಿಗೆ ಹೆಚ್ಚು ಪ್ರಾಮುಖ್ಯತೆಯುಳ್ಳ ಸಚಿವ ಸ್ಥಾನ ನೀಡುವುದಾಗಿ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದರು. ಆದರೆ ಖಾತೆ ಹಂಚಿಕೆ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಸ್ಥಾನ ನೀಡಿದ್ದರಿಂದ ಸಮಾಧಾನ ವ್ಯಕ್ತಪಡಿಸಿ ಖಾತೆ ತಿರಸ್ಕರಿಸಿದ್ದ ಜಿ.ಟಿ.ದೇವೇಗೌಡರ ಮನ ಒಲಿಸಿ, ಬೇರೆ ಖಾತೆ ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎನ್ನಲಾಗಿದೆ.