ಮಂಗಳೂರು: ಸುಮಲತಾ ಅವರು ಮಂಡ್ಯದ ಗೌಡತಿ ಅಲ್ಲ ಎಂಬ ಸಂಸದ ಶಿವರಾಮೇಗೌಡ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಸುಮಲತಾ ಅವರು, ಬೆಲೆ ಇಲ್ಲದವರ ಮಾತಿಗೆ ನಾನು ಬೆಲೆ ಕೊಡುವುದಿಲ್ಲ. ಜನರೇ ಉತ್ತರಿಸುತ್ತಾರೆ ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಷ್​ ಸೋಮವಾರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಗೆ ಪೂಜೆ ನೆರವೇರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಲತಾ ನಿಜಕ್ಕೂ ಒಕ್ಕಲಿಗರಾ? ಹಾಗೆ ಹೀಗೆ, ಅಂತೆಲ್ಲಾ ಕೆಲವರು ಮಾತನಾಡಿದ್ದಾರೆ. ಆದರೆ, ನಾನು ಆ ಲೆವೆಲ್ ಗೆ ಹೋಗಲ್ಲ. ಇನ್ನೇನು ಹದಿನೇಳು ದಿನಗಳಲ್ಲಿ ಜನರೇ ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು. 


ಇನ್ನು, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಾಲ್ವರು ಸುಮಲತಾ ಹೆಸರಿನವರು ಸ್ಪರ್ಧಿದಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಕೆ.ಎಸ್.ಪುಟ್ಟಣ್ಣಯ್ಯ ಅವರು ಸ್ಪರ್ಧಿಸಿದ್ದಾಗಲೂ ಇದೇ ಸಮಸ್ಯೆ ಎದುರಾಗಿತ್ತು. ಜನರಿಗೆ ನನ್ನ ಅಪರಿಚಯವಿದೆ. ಯಾರು ಏನೇ ತಂತ್ರ ಹೂಡಿದರೂ ಜನ ಅಷ್ಟು ಸುಲಭವಾಗಿ ಮೋಸ ಹೋಗುವುದಿಲ್ಲ. ಮತ ಯಂತ್ರದಲ್ಲಿ ನನ್ನ ಫೋಟೋ ಇರುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಸುಮಲತಾ ಹೇಳಿದರು.


ಇದೇ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿದರು. ಚಿತ್ರ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್ ಅವರು ಸುಮಲತಾಗೆ ಸಾಥ್ ನೀಡಿದರು.