ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕಾರ್ಯಕ್ರಮ ಅನುಷ್ಠಾನದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಕ್ರಮ ಕೈಗೊಳ್ಳುವುದಾಗಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಎಚ್ಚರಿಕೆ ನೀಡಿದರು. 


COMMERCIAL BREAK
SCROLL TO CONTINUE READING

ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖೆ ತುಮಕೂರಿನಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ತಾಲೂಕು ಐಇಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರ ಕೈಗಳಿಗೆ ಕೆಲಸ ಕೊಡುವ ಉದ್ದೇಶದಿಂದ ಕೇಂದ್ರ ಸರಕಾರ ಹಿಂದೆಯೇ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ತರಲಾಯಿತು. ಈ ಯೋಜನೆಯಿಂದ ದೇಶದಲ್ಲಿರುವ 623 ಜಿಲ್ಲೆಗಳಲ್ಲಿ ಇಂದು ಉದ್ಯೋಗ ಸೃಷ್ಟಿಯಾಗಿದೆ. ಈ ಕಾರ್ಯಕ್ರಮದ ಜವಾಬ್ದಾರಿಯನ್ನು ಗ್ರಾಮ ಪಂಚಾಯತಿ ಹೆಗಲಿಗೆ ಹೊರಿಸಲಾಗಿದೆ. 


ನಮ್ಮ ಜಿಲ್ಲೆಯಲ್ಲಿ ಅದರಲ್ಲೂ ಕೊರಟಗೆರೆ ತಾಲೂಕಿನಲ್ಲಿ ಈ ಕಾರ್ಯಕ್ರಮ ಅನುಷ್ಠಾನ ನಿರ್ಲಕ್ಷ್ಯಕ್ಕೆ ಒಳಗಾಗಿದೆ.‌ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆ. ಜನರ ಸಹಕಾರವೂ ಬೇಕು. ಅಧಿಕಾರಿಗಳು ಹೆಚ್ಚು ಆಸಕ್ತಿಯಿಂದ ಈ ಕಾರ್ಯಕ್ರಮ ತಂದರೆ ಯಶಸ್ವಿಯಾಗಲಿದೆ ಎಂದರು. 


ಅಧಿಕಾರಿಗಳ ವರ್ಗಾವಣೆಯಿಂದಲೂ ಈ ಕಾರ್ಯಕ್ರಮ ನಿರೀಕ್ಷಿತ ಮಟ್ಟದಲ್ಲಿ ಜಾರಿಯಾಗಲು ಸಾಧ್ಯವಾಗಿಲ್ಲ. ಕೆಲ ಅಧಿಕಾರಿಗಳಿಗೆ ಈ ಯೋಜನೆಯಡಿ ಏನೆಲ್ಲ ಕಾರ್ಯಕ್ರಮ ರೂಪಿಸಬಹುದು ಎಂಬ ಮಾಹಿತಿ ಇರುವುದಿಲ್ಲ.‌ ಇದರಿಂದ ಕೆಲ ಸಿವಿಲ್ ಕೆಲಸಗಳು ಕಾರ್ಯಗತಗೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಹೀಗಾಗಿ ಮುಂದಿನ ದಿನಗಳಲ್ಲಿ ಕೊರಟಗೆರೆ ತಾಲೂಕು‌ ಮೊದಲ ಸ್ಥಾನಕ್ಕೆ ಬರುವ ನಿಟ್ಟಿನಲ್ಲಿ ಅಧಿಕಾರಿಗಳು‌ ಕೆಲಸ ಮಾಡುವಂತೆ ಸೂಚಿಸಿದರು. 


ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ವಿಶ್ವಸಂಸ್ಥೆ ಕೂಡ ಶ್ಲಾಘನೆ ವ್ಯಕ್ತಪಡಿಸಿ, ಇತರೆ ರಾಷ್ಟ್ರಗಳು ಈ ಕಾರ್ಯಕ್ರಮವನ್ನು ಮಾದರಿಯನ್ನಾಗಿ ತೆಗೆದುಕೊಳ್ಳುವ ಸಲಹೆ ನೀಡಿದೆ ಎಂದು ಹೇಳಿದರು.