ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ನಾಯಕತ್ವ ಬದಲಾವಣೆಗೂ ವರಿಷ್ಠರು ಸಿದ್ಧರಿದ್ದು, ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾದರೂ ನಾನು ಬೆಂಬಲಿಸಲು ಸಿದ್ಧನಿದ್ದೇನೆ ಎಂದು ಸಚಿವ ಜಿ.ಟಿ. ದೇವೇಗೌಡ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಸಮ್ಮಿಶ್ರ ಸರ್ಕಾರದಲ್ಲಿ ಭುಗಿಲೆದ್ದಿರುವ ಬಂಡಾಯದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಿ.ಟಿ. ದೇವೇಗೌಡ, ಯಾವುದೇ ಕಾರಣಕ್ಕೂ ಸರ್ಕಾರ ಉರುಳಲು ಬಿಡುವುದಿಲ್ಲ. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರೇ ಮುಖ್ಯಮಂತ್ರಿಯಾಗಲಿ ಅಥವಾ ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿ ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾವು ಮುಕ್ತರಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.


ನಾನು ರಾಜೀನಾಮೆ ಕೊಡಲ್ಲ: 
ಈ ಸಂದರ್ಭದಲ್ಲಿ ಶಾಸಕರ ರಾಜೀನಾಮೆ ಪರ್ವದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿ.ಟಿ. ದೇವೇಗೌಡರು, ನಾನು ಜೆಡಿಎಸ್ ಪಕ್ಷದಿಂದ ಗೆದ್ದಿದ್ದೇನೆ. ಜೆಡಿಎಸ್ ನಲ್ಲಿಯೇ ಇರುತ್ತೇನೆ. ಮತದಾರರಿಗೆ ಮೋಸ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದಿದ್ದಾರೆ.


ಯಾವುದೇ ಕಾರಣಕ್ಕೂ ಮೈತ್ರಿ ಸರ್ಕಾರ ಉರುಳಲ್ಲ:
ಸಮ್ಮಿಶ್ರ ಸರ್ಕಾರ ಉಳಿಸುವುದು ನಮ್ಮ ಮೊದಲ ಆದ್ಯತೆ. ಎಲ್ಲರೂ ಒಗ್ಗಟ್ಟಾಗಿರಿ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಸೂಚಿಸಿದ್ದು, ಸಚಿವ ಸ್ಥಾನ ಸಿಗದ ಕಾರಣ ಅಸಮಾಧಾನಗೊಂದು ಪಕ್ಷ ಬಿಟ್ಟು ಹೋಗಿರುವವರನ್ನು ವಾಪಾಸ್ ಕರೆತರೋಣ ಎಂದು ಹೇಳಿರುವುದಾಗಿ ಜಿಟಿಡಿ ತಿಳಿಸಿದ್ದಾರೆ.


ರೆಸಾರ್ಟ್ ಗೆ ತೆರಳಲು ಚಿಂತನೆ:
ಬಿಜೆಪಿ ಅವರು ನಮ್ಮ ಪಕ್ಷದ ಶಾಸಕರನ್ನು ಹೈಜಾಕ್ ಮಾಡುವ ಪ್ರಯತ್ನ ಮಾಡುವ ಆತಂಕವಿದೆ.
ಹಾಗಾಗಿ ಎಲ್ಲರನ್ನೂ ಒಂದು ಕಡೆ  ಸೇರಿಸುವ ಚಿಂತನೆ ನಡೆಸಲಾಗಿದೆ ಎಂದು ಸಚಿವ ಜಿ.ಟಿ. ದೇವೇಗೌಡ ಹೇಳಿದ್ದಾರೆ.