ಬೆಂಗಳೂರು : ಬೇಸಿಗೆ ಹಂಗಾಮಿನಲ್ಲಿ ಮಾವಿನ ನಿರ್ವಹಣೆ ಕುರಿತು ತೋಟಗಾರಿಕೆ ಇಲಾಖೆಯಿಂದ ಮಾವು ಬೆಳೆಗಾರರಿಗೆ ಸಲಹೆಗಳನ್ನು ನೀಡಲಾಗಿದೆ.


COMMERCIAL BREAK
SCROLL TO CONTINUE READING

ಇತ್ತೀಚೆಗೆ ತೋಟಗಾರಿಕೆ ಇಲಾಖೆಯ ತೋಟಗಾರಿಕೆ ಉಪನಿರ್ದೇಶಕರು, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಮತ್ತು ವಿಷಯ ತಜ್ಞರ ತಂಡ, ಕೊಪ್ಪಳ ತಾಲ್ಲೂಕಿನ ಅನೇಕ ಮಾವಿನ ತೋಟಗಳಿಗೆ ಭೇಟಿ ನೀಡಿದಾಗ ಕಂಡು ಬಂದದ್ದು ಎಂದರೆ, ತಳಿಯನ್ನಾಧಾರಿಸಿ ತಡವಾಗಿ ಆದರೂ ಈಗ ಮಾವಿನ ಮರದ ತುಂಬಾ ಎಲ್ಲಾ ಕಡೆ ಹೂ ಬಂದಿದ್ದು, ತೋಟದ ಪಕ್ಕದಲ್ಲಿ ಹೋಗುವಾಗ ಹೂವಿನ ಘಮ ಆಸ್ವಾಧಿಸಲು ಸಿಗುತ್ತಿದೆ.


ಮಾವಿನ ತೋಟದಲ್ಲಿ ಕಂಡು ಬಂದ ಅಂಶಗಳು ;


ಮಾವಿನ ತೋಟದಲ್ಲಿ ಕಂಡು ಬಂದ ಅಂಶಗಳ ವಿವರ ಇಂತಿದೆ. ಉತ್ತಮ ಹೂ ಬಿಟ್ಟ ಮಾವಿನ ಗಿಡಗಳು, ಜಿಗಿ ಹುಳು, ಹೂತೆನೆ ಕೊರಕ, ಥ್ರಿಪ್ಸ್ ನುಸಿ, ಹಿಟ್ಟು ತಿಗಣೆಯಂತಹ ಕೀಟಗಳು ಕಾಣಿಸಿಕೊಂಡಿವೆ. ಈಗಾಗಲೇ ಕಾಯಿ ಕಾಣಿಸಿಕೊಂಡಲ್ಲಿ ಕಾಯಿ ಉದುರುವಿಕೆ ಹಾಗೂ ಅಂಗಮಾರಿ ರೋಗದ ಬಾಧೆ ಹೆಚ್ಚಾಗಿದೆ. ಕೆಲವು ನಿರ್ಲಕ್ಷಿತ ತೋಟಗಳಲ್ಲಿ ಕಾಂಡಕೊರೆಯುವ ಹುಳು ಮತ್ತು ಸೊರಗು ರೋಗ ಕಾಣಿಸಿಕೊಂಡಿದೆ.  ಕೆಲವು ಕಡೆ ಲಿಂಬೆ ಗಾತ್ರದ ಕಾಯಿಗಳೂ ಉದುರುತ್ತಿವೆ.ಈ ಎಲ್ಲಾ ಸಮಸ್ಯೆಗಳಿಗೆ ಅಧಿಕಾರಿಗಳು ಮಾವು ಬೆಳೆಗಾರರಿಗೆ ಕೆಲವು ಸಲಹೆ ನೀಡಿರುತ್ತಾರೆ.


ಇದನ್ನೂ ಓದಿ-Pots Office ಈ ಯೋಜನೆಯಲ್ಲಿ ₹150 ಉಳಿತಾಯ ಮಾಡಿ ₹20 ಲಕ್ಷ ಲಾಭ ಪಡೆಯಿರಿ!


ಮಾವು ಬೆಳೆಗಾರರಿಗೆ ಸಲಹೆಗಳು ;


ಈಗ ತಾಪಮಾನ ಹೆಚ್ಚುತ್ತಿರುವುದರಿಂದ ನಿಯಮಿತವಾಗಿ ನೀರು ಕೊಡಬೇಕು. ಕಡಲೇ ಗಾತ್ರದ ಕಾಯಿಗಳಾಗಿದ್ದಲ್ಲಿ ನೀರನ್ನು ವಾರದಲ್ಲಿ ಎರಡು ಸಾರಿ ಹನಿ ನೀರಾವರಿ ಮೂಲಕ ಕೊಡಬೇಕು. ನೀರು ಕೊಡುವಾಗ ಗಿಡದ ಬಡ್ಡಿಯ ಸುತ್ತಲೂ 4-5 ಅಡಿ ಪಾತಿ ಮಾಡಿ ಸುತ್ತಲಿನ ಮಣ್ಣನ್ನು ಸಡಿಲಿಸಿ ನೀರು ಕೊಡಬೇಕು. ಇದೇ ಸಮಯದಲ್ಲಿ ಪೋಷಕಾಂಶಗಳ ನಿರ್ವಹಣೆಯೂ ಮುಖ್ಯ ಆಗಿರುವುದರಿಂದ ನೀರಿನಲ್ಲಿ ಕರಗುವ ಮಾವು ಸ್ಪೇಷಲ್, ಬೋರಾನ್ ಮತ್ತು ಪೊಟ್ಯಾಷಿಯಂ ನೈಟ್ರೇಟ್ ಗೊಬ್ಬರಗನ್ನು ತಜ್ಞರ ಸಲಹೆಯಂತೆ ಸಿಂಪಡಿಸಬೇಕು.


ಈ ಸಮಯದಲ್ಲಿ ಜಿಗಿಹುಳು, ಬೂದಿರೋಗ ಅಲ್ಲದೇ ಚಿಬ್ಬುರೋಗ ಕೂಡಾ ಕಾಣಿಸಿಕೊಂಡು ಹೂಗಳು ಒಣಗಿ ಕಪ್ಪಾಗಿ ಉದುರುತ್ತವೆ. ಇದಕ್ಕೆಲ್ಲ ತಜ್ಞರ ಸಲಹೆಯಂತೆ ಸೂಕ್ತ ಶೀಲಿಂದ್ರನಾಶಕ ಮತ್ತು ಕೀಟನಾಶಗಳನ್ನು ಸಿಂಪಡಿಸಬೇಕು.ಒಂದೆರಡು ಭಾರಿ ಅಜಾಡಿರಾಕ್ಟಿನ್ ಎನ್ನುವ ಬೇವಿನ ಎಣ್ಣೆ ಸಿಂಪಡಿಸಬೇಕು. ಕಾಂಡಕ್ಕೆ ಗೆದ್ದಲು ಹುಳು ಬಾರದಂತೆ ಸಿ.ಓ.ಸಿ. ಜೊತೆಗೆ ಕ್ಲೋರೋಫೈರಿಫಾಸ್ ಕೀಟನಾಶಕ ಮಿಶ್ರಣ ಮಾಡಿ ಗಿಡದ ಬಡ್ಡಿಗೆ ಲೇಪಿಸಬೇಕು.


ಕಾಂಡಕೊರ ಹುಳು ಮತ್ತು ಶಿಲೀಂಧ್ರದಿಂದಾಗಿ ಸೊರಗು ರೋಗ ಕಾಣಿಸಿಕೊಳ್ಳುತ್ತದೆ. ತಜ್ಞರ ಸಲಹೆಯಂತೆ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಬೆಂಗಳೂರು ಅಭಿವೃದ್ಧಿ ಪಡಿಸಿದ ಬೋರಾರ ಹತೋಟಿ ತಂತ್ರಜ್ಞಾನದ ಮಿಶ್ರಣ ಬಳಸಬೇಕು ಮತ್ತು ಶಿಲೀಂಧ್ರನಾಶಕಗಳನ್ನು ಡ್ರೇಂಚಿಂಗ್ ಮಾಡಬೇಕು.


ಈ ಸಾರಿ ಉತ್ತಮ ಫಸಲಿನ ನಿರೀಕ್ಷೆ ಇರುವುದರಿಂದ ಮಾವು ಬೆಳೆಗಾರರು ತಮ್ಮ ಫಸಲನ್ನು ಕಾಪಾಡಿಕೊಂಡಲ್ಲಿ ಉತ್ತಮ ಲಾಭಗಳಿಸಬಹುದು. ಉತ್ತಮ ಪೋಷಣೆಗಾಗಿ ತೋಟಗಾರಿಕೆ ಇಲಾಖೆ (ನಿಡಶೇಷಿ ತೋಟಗಾರಿಕೆ ಕ್ಷೇತ್ರ) ದಲ್ಲಿ ಉತ್ಪಾದಿಸಿದ ಎರೆಜಲವನ್ನು 2 ಲೀ. ಅನ್ನು 10 ಲೀ. ನೀರಿಗೆ ಬೆರೆಸಿ ಆಗಾಗ ಸಿಂಪಡಿಸುತ್ತಿರಬೇಕು.


ಕೀಟಗಳ ನಿಯಂತ್ರಣಕ್ಕೆ ಇಮಿಡಾಕ್ಲೋಪ್ರಿಡ್ 17.8 % ಎಸ್.ಎಲ್. 0.50 ಮಿ.ಲೀ. ಅಥವಾ ಲಾಂಬ್ಡಾಸೈಹ್ಯಾಲೋಥ್ರಿನ್ 5.0 ಇ.ಸಿ. ಅಥವಾ ಬೂಪ್ರೊಪಿನ್ 25 ಇ.ಸಿ. ಅಲ್ಲದೇ ಅಜಾಡರ‍್ಯಾಕ್ಟಿನ್ 10000 ಪಿ.ಪಿ.ಎಂ. 2 ಮಿ.ಲೀ. ಕೀಟನಾಶಕಗಳನ್ನು ಬದಲಾಯಿಸಿ ಸಿಂಪಡಿಸುತ್ತಿರಬೇಕು. ರೋಗಗಳು ಕಾಣಿಸಿಕೊಂಡಾಗ ಶಿಲೀಂಧ್ರನಾಶಕಗಳಾದ ಹೆಕ್ಸಕೊನಾಜೋಲ್ 5% ಎಸ್.ಸಿ. 1 ಮಿ.ಲೀ. ಅಥವಾ ಟೆಬುಕೊನಜಾಲ್ 25 ಇ.ಸಿ. 0.50 ಮಿ.ಲೀ. ಅಥವಾ ಡೈಫೆಂಟಕೊನಜಾಲ್ 25 ಇ.ಸಿ. 0.50 ಮಿ.ಲೀ. ಅಥವಾ ಕಾರ್ಬನ್‌ಡೈಜಿಂ 12 % + ಮ್ಯಾಂಕೋಜೆಬ್ 43 % ಡಬ್ಲೂö್ಯಪಿ. ಯಂತಹ ಶಿಲೀಂಧ್ರ ನಾಶಕಗಳನ್ನು ಬದಲಾಯಿಸಿ ಸಿಂಪಡಿಸುತ್ತಿರಬೇಕು.  ಎರೆಜಲ, ಜೀವಾಮೃತ ಮತ್ತು ಗೋಕೃಪಾಮೃತದಂತಹ ಸಾವಯವ ಪದಾರ್ಥಗಳನ್ನು ನಿಯಮಿತವಾಗಿ ಸಿಂಪಡಿಸುವುದರಿಂದ ಹೂ ಉದುರುವಿಕೆ ಕಡಿಮೆ ಆಗಿ ಉತ್ತಮ ಗುಣಮಟ್ಟದ ಫಸಲನ್ನು ನಿರೀಕ್ಷಿಸಬಹುದು.


ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪನಿರ್ದೇಶಕರ ಕಛೇರಿ ಹಾಗೂ ಆಯಾ ತಾಲ್ಲೂಕಾ ಕಛೇರಿಗಳನ್ನು ಮತ್ತು ಹಾರ್ಟಿಕ್ಲಿನಿಕ್ ವಿಷಯ ತಜ್ಞರನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.