ಚಿತ್ರದುರ್ಗ: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ವಿಚಾರವಾಗಿ 'ಉಪ್ಪು ತಿಂದವರು ನೀರು ಕುಡಿಯಲೇ ಬೇಕು' ಎಂಬ ಹೇಳಿಕೆ ನೀಡಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು, ಡಿ.ಕೆ. ಶಿವಕುಮಾರ್​ ಅಣ್ಣನವರೇ ನನ್ನ ಮಾತಿನಿಂದ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದು ಕ್ಷಮೆ ಯಾಚಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು, ಮಾಜಿ ಸಚಿವ ಡಿ.ಕೆ. ಶಿವಕುಮಾರ್​ ದೆಹಲಿಯಲ್ಲಿ ಇ.ಡಿ. ವಿಚಾರಣೆಗೆ ಒಳಪಟ್ಟಿದ್ದಾರೆ. ನಾನು ಸಾಮಾನ್ಯವಾಗಿ ಯಾರಾದರೂ ಕಷ್ಟದಲ್ಲಿದ್ದಾಗ ಟೀಕಿಸಲು ಹೋಗುವುದಿಲ್ಲ. ಡಿಕೆಶಿ ಅವರು ನನ್ನನ್ನು ಟೀಕಿಸಿ ಮಾತನಾಡುತ್ತಿದ್ದರೂ, ನಾನೂ ಟೀಕಿಸಿ ಮಾತನಾಡಿದ್ದೇನೆ. ನನ್ನ ಹೇಳಿಕೆ ರಾಜಕೀಯವಾಗಿ ಸೀಮಿತವೇ ಹೊರತು, ನನ್ನ ಮನಸ್ಸಿನ ಮಾತುಗಳಲ್ಲ. ಒಂದು ವೇಳೆ ನನ್ನ ಮಾತಿನಿಂದ ನೋವಾಗಿದ್ದರೆ ಡಿ.ಕೆ. ಶಿವಕುಮಾರ್​ ಅಣ್ಣನವರೇ ದಯವಿಟ್ಟು ಕ್ಷಮಿಸಿ ಎಂದರು.


ಕಳೆದ ವಾರ ಡಿ.ಕೆ. ಶಿವಕುಮಾರ್ ಅವರಿಗೆ ಇಡಿ ಸಮನ್ಸ್ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಸಚಿವ ಶ್ರೀರಾಮುಲು 'ಉಪ್ಪು ತಿಂದವರು ನೀರು ಕುಡಿಯಲೇ ಬೇಕು' ಎಂದಿದ್ದರು.


ಈ ಹೇಳಿಕೆ ಕುರಿತು ಗೌರಿ-ಗಣೇಶ ಹಬ್ಬದಂದು ಪ್ರತಿಕ್ರಿಯಿಸಿದ್ದ ಡಿಕೆಶಿ,  ರಾಜ್ಯದ ಉಪಮುಖ್ಯಮಂತ್ರಿ ಆಗಿದ್ದವರು ಒಬ್ಬರು ಉಪ್ಪು ತಿಂದವರು ನೀರು ಕುಡಿಯಬೇಕೆಂದು ಹೇಳಿದ್ದಾರೆ. ಕಾಂಗ್ರೆಸ್​ ಪಕ್ಷಕ್ಕೋಸ್ಕರ, ನಮ್ಮ ನಾಯಕರಿಗೋಸ್ಕರ, ನನ್ನನ್ನು ನಂಬಿದಂತಹ ಜನರಿಗೋಸ್ಕರ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಉಪ್ಪು ತಿಂದಿದ್ದರೆ, ನೀರು ಕುಡಿಯಲಿಕ್ಕೇ ನಾನು ಸಿದ್ಧನಿದ್ದೇನೆ ಎಂದು ತಿರುಗೇಟು ನೀಡಿದ್ದರು.