ಬೆಂಗಳೂರು: ರಾಜ್ಯದ ನೆರೆ ಪರಿಸ್ಥಿತಿಯ ಬಗ್ಗೆ ಪ್ರಧಾನ ಮಂತ್ರಿಗಳೊಂದಿಗೆ ಮಾತನಾಡುವ ಧೈರ್ಯ ನಿಮಗೆ ಇಲ್ಲವಾದರೆ ನಾವೂ ನಿಮ್ಮೊಂದಿಗೆ ಬರುತ್ತೇವೆ ಎಂದು ಸಿಎಂ ಯಡಿಯೂರಪ್ಪಗೆ  ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ, "ಯಡಿಯೂರಪ್ಪನವರೇ, ನಿಮಗೆ ಹಾಗೂ 25 ಬಿಜೆಪಿಯ ಸಂಸದರಿಗೆ ಪ್ರಧಾನಮಂತ್ರಿಗಳ‌‌ ಜೊತೆ ರಾಜ್ಯದ ನೆರೆ ಪರಿಸ್ಥಿತಿಯ ಕುರಿತು ಗಟ್ಟಿಯಾಗಿ ಮಾತನಾಡುವ ಧೈರ್ಯ ಇಲ್ಲ‌ ಎಂದಾದರೆ ನಾವೂ ನಿಮ್ಮ ಜೊತೆ ದೆಹಲಿಗೆ ಬರುತ್ತೇವೆ. ಸರ್ವ ಪಕ್ಷ ನಿಯೋಗದ ಜೊತೆ ಪ್ರಧಾನಿಗಳನ್ನು ಭೇಟಿ ಮಾಡೋಣ" ಎಂದಿದ್ದಾರೆ. ಅಲ್ಲದೆ, ಉತ್ತರ ಕರ್ನಾಟಕದವರನ್ನು ಕಡೆಗಣಿಸಬೇಡಿ, ಅದೂ ಸಹ ಭಾರತಕ್ಕೇ ಸೇರಿದ್ದು ಎಂದು ಹೇಳುವ #NorthKarnatakaBelongstoIndia ಎಂಬ ಹ್ಯಾಷ್‌ ಟ್ಯಾಗ್‌ ಬಳಸಿದ್ದಾರೆ.

ರಾಜ್ಯದಲ್ಲಿರುವುದು ತುಘಲಕ್ ಸರ್ಕಾರ ‌ಮಾತ್ರ ಅಂತ ಅಂದುಕೊಂಡಿದ್ದೆ. ಆದರೆ ಈ ಸರ್ಕಾರಕ್ಕೆ ಕಣ್ಣು‌ ಕಿವಿ ಯಾವುದೂ‌ ಇಲ್ಲ. ನೆರೆ ಬಂದು ಒಂದುವರೆ ತಿಂಗಳಾದರೂ ನಿರಾಶ್ರಿತರಿಗೆ ಸೂಕ್ತ ವಸತಿ‌ ಸೌಲಭ್ಯ ಒದಗಿಸಲು‌ ಸಾಧ್ಯವಾಗಿಲ್ಲ ಎಂದು ಇದೇ ವೇಳೆ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಆದರೆ, ಈ ಹಿಂದೆಯೂ ಕೂಡ ವಿರೋಧ ಪಕ್ಷಗಳು ಸರ್ವಪಕ್ಷ ನಿಯೋಗ ತೆರಳುವ ಬಗ್ಗೆ ಮಾಡಿದ್ದ ಪ್ರಸ್ತಾಪವನ್ನು ನಿರಾಕರಿಸಿದ್ದ ಸಿಎಂ ಯಡಿಯೂರಪ್ಪ ಅವರು, ಪ್ರವಾಹ ಪರಿಹಾರ ಸಂಬಂಧ ದೆಹಲಿಗೆ ಸರ್ವಪಕ್ಷ ನಿಯೋಗ ತೆರಳುವ ಅಗತ್ಯವಿಲ್ಲ. ದೇಶಾದ್ಯಂತ ಸುಮಾರು 12 ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಸೇರಿ ಒಟ್ಟಿಗೆ ಪರಿಹಾರ ಬಿಡುಗಡೆ ಮಾಡಲಿದೆ ಎಂದು ಹೇಳಿದ್ದರು.