ತಾಕತ್ತಿದ್ದರೆ ನಮ್ಮನ್ನು ರಾಜಕೀಯವಾಗಿ ಎದುರಿಸಿ: ಸಿಎಂಗೆ ಪ್ರತಾಪ್ ಸಿಂಹ ಸವಾಲ್
ಅನಂತ್ ಕುಮಾರ್ ಹೆಗಡೆ ಅವರನ್ನು ರಾಜಕೀಯವಾಗಿ ಎದುರಿಸಿ ಎಂದು ಸಂಸದ ಪ್ರತಾಪ್ ಸಿಂಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ.
ಬೆಂಗಳೂರು: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಬೆಂಗಾವಲು ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಘಟನೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ, ಮುಖ್ಯಮಂತ್ರಿಗಳೇ, ನಿಮಗೆ ತಾಕತ್ತಿದ್ದರೆ ಅನಂತ ಕುಮಾರ ಹೆಗಡೆ ಅವರನ್ನು ರಾಜಕೀಯವಾಗಿ ಎದುರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ.
ಮಂಗಳವಾರ ರಾತ್ರಿ ಕೇಂದ್ರ ಕೌಶಲ್ಯಾಭಿವೃದ್ಧಿ ಖಾತೆ ರಾಜ್ಯ ಸಚಿವ ಅನಂತ್ ಕುಮಾರ್ ಹೆಗಡೆ ಅವರ ಕಾರಿಗೆ ಲಾರಿ ಡಿಕ್ಕಿ ಹೊಡೆಯಲು ಬಂದ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸಂಸದ ಪ್ರತಾಪ್ ಸಿಂಹ, ಮುಖ್ಯಮಂತ್ರಿಗಳೇ, ನಿಮಗೆ ತಾಕತ್ತಿದ್ದರೆ ಅನಂತ ಕುಮಾರ ಹೆಗಡೆ ಅವರನ್ನು ರಾಜಕೀಯವಾಗಿ ಎದುರಿಸಿ. ಅದನ್ನು ಬಿಟ್ಟು ಈ ರೀತಿಯ ಪ್ರಯತ್ನ ಮಾಡಿದರೆ ನಾವು ಬೀದಿಗಿಳಿದು ಹೋರಾಟ ಮಾಡುತ್ತೇವೆ. ಆಗ ನಿಮ್ಮನ್ನು ಯಾರೂ ಕಾಪಾಡುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಏನಿದು ಪ್ರಕರಣ?
ಕೇಂದ್ರ ಕೌಶಲ್ಯಾಭಿವೃದ್ಧಿ ಖಾತೆ ರಾಜ್ಯ ಸಚಿವ ಅನಂತ್ ಕುಮಾರ್ ಹೆಗಡೆ ಮಂಗಳವಾರ(ಏ. 17) ರಾತ್ರಿ ಶಿರಸಿಯಿಂದ ಬೆಂಗಳೂರಿಗೆ ಸಾಗುತ್ತಿದ್ದ ವೇಳೆ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಹಲಗೇರಿ ಕ್ರಾಸ್ ಬಳಿ ಲಾರಿಯೊಂದು ಸಚವರ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಸಚಿವ ಅನಂತ್ ಕುಮಾರ್ ಹೆಗಡೆ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಘಟನೆ ಬೆನ್ನಲ್ಲೇ ಹೆಗಡೆಯವರು ಸರಣಿ ಟ್ವೀಟ್ ಮಾಡಿದ್ದ ಅವರು, ಅಪಘಾತದಲ್ಲಿ ಲಾರಿ ಚಾಲಕನ ಗುರಿ ನನ್ನ ಕಾರೇ ಆಗಿತ್ತು ಎಂದು ಗಂಭೀರವಾಗಿ ಆರೋಪ ಮಾಡಿದ್ದಾರೆ.