ಪಡಿತರ ಚೀಟಿದಾರರಿಗೆ ಮಹತ್ವದ ಮಾಹಿತಿ
ಪಡಿತರ ಚೀಟಿದಾರರ ಇ-ಕೆವೈಸಿ ಹೆಬ್ಬೆಟ್ಟು ನೀಡಲು ಜನವರಿಯಿಂದ ಮಾರ್ಚ್ 31ರವರೆಗೆ ಅವಕಾಶ ನೀಡಿದೆ.
ಬೆಂಗಳೂರು: ರಾಜ್ಯದ ಎಲ್ಲಾ ಪಡಿತರ ಚೀಟಿದಾರರ ಕುಟುಂಬದ ಸದಸ್ಯರ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಗಡುವು ವಿಸ್ತರಿಸಿರುವ ಸರ್ಕಾರ ಮಾರ್ಚ್ 31ರವರೆಗೆ ಅವಕಾಶ ಕಲ್ಪಿಸಿದೆ.
ಈ ಸಂಬಂಧ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಆಯುಕ್ತರು, ರಾಜ್ಯದ ಎಲ್ಲಾ ಜಂಟಿ/ಉಪ ನಿರ್ದೇಶಕರಿಗೆ ಪತ್ರ ಬರೆದಿದ್ದು ಇದಕ್ಕೂ ಮೊದಲು ಡಿಸೆಂಬರ್ 1, 2019 ರಿಂದ ಡಿಸೆಂಬರ್ 10, 2019ರ ವರೆಗೆ ಮತ್ತು ಜನವರಿ ಮಾಹೆಯಲ್ಲಿ 01/01/2020 ರಿಂದ 10/01/2020 ರವರೆಗೆ ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿ ವರ್ತಕರು ಕಡ್ಡಾಯವಾಗಿ ಅಂಗಡಿಗಳನ್ನು ತೆರೆದು ಅವರ ವ್ಯಾಪ್ತಿಯ ಪಡಿತರ ಚೀಟಿ(Ration Card)ಯಲ್ಲಿನ ಸದಸ್ಯರುಗಳ ಇ-ಕೆವೈಸಿ ಕಡ್ಡಾಯವಾಗಿ ನಿರ್ವಹಿಸುವಂತೆ ಸೂಚಿಸಲಾಗಿತ್ತು.
One Nation-One Ration Card ಬಗ್ಗೆ ತಿಳಿಯಲೇಬೇಕಾದ ವಿಷಯ
ಆದರೆ ಈ ವರೆಗೂ ರಾಜ್ಯದಲ್ಲಿ ಇ-ಕೆವೈಸಿ ಸಂಗ್ರಹಿಸಿರುವ ಕಾರ್ಯ ಕೇವಲ ಶೇ. 34.32 ರಷ್ಟು ಮಾತ್ರ ಪೂರ್ಣಗೊಂಡಿದ್ದು, ಬಾಕಿ ಇರುವ ಪಡಿತರ ಚೀಟಿದಾರರ ಇ-ಕೆವೈಸಿ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕಾಗಿದೆ. ಹಾಗಾಗಿ 01/01/2020 ರಿಂದ 31/03/2020 ರ ಬರೆಗೆ ಪ್ರತಿದಿನ ನ್ಯಾಯಬೆಲೆ ಅಂಗಡಿಯಲ್ಲಿ ಇ-ಕೆವೈಸಿ ಸಂಗ್ರಹಿಸುವ ಕಾರ್ಯವನ್ನು ಕಡ್ಡಾಯವಾಗಿ ನಿರ್ವಹಿಸಬೇಕು ಎಂದು ಸರ್ಕಾರ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.
ಜೊತೆಗೆ ಇ-ಕೆವೈಸಿ ಪ್ರಕ್ರಿಯೆ ಪ್ರಗತಿಯಲ್ಲಿರುವುದರಿಂದ ಹೊಸ ನ್ಯಾಯ ಬೆಲೆ ಅಂಗಡಿಗಳನ್ನು ದತ್ತಾಂಶದಲ್ಲಿ ಸೃಜಿಸುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗಿದೆ.