ಬೆಂಗಳೂರು: ರಾಜ್ಯದಲ್ಲಿ COVID -19 ವ್ಯಾಪಕವಾಗಿ ಹರಡುತ್ತಿರುವುದರಿಂದ ಮಕ್ಕಳ ಜೀವವನ್ನು ಒತ್ತೆ ಇಟ್ಟು  ಎಸ್ಎಸ್ಎಲ್‌ಸಿ (SSLC) ಪರೀಕ್ಷೆ ನಡೆಸಬೇಡಿ ಎಂದು ಪ್ರತಿಪಕ್ಷಗಳ ನಾಯಕರು, ಶಿಕ್ಷಣ ತಜ್ಞರು, ಶಿಕ್ಷಕರು ಮತ್ತು ಪೋಷಕರು ಎಷ್ಟೇ ಆಗ್ರಹ-ವಿನಂತಿ ಮಾಡಿಕೊಂಡರೂ ಪ್ರತಿಷ್ಟೆಯ ವಿಷಯವನ್ನಾಗಿ ಮಾಡಿಕೊಂಡಿರುವ ರಾಜ್ಯ ಸರ್ಕಾರ ಇಂದಿನಿಂದ ರಾಜ್ಯಾದ್ಯಂತ SSLC ಪರೀಕ್ಷೆ ನಡೆಸುತ್ತಿದೆ‌.


COMMERCIAL BREAK
SCROLL TO CONTINUE READING

ಇಂದಿನಿಂದ ಜುಲೈ 4ರವರೆಗೆ SSLC ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಮೊದಲ ದಿನವಾದ ಇಂದು ದ್ವಿತೀಯ ಇಂಗ್ಲಿಷ್ ಪರೀಕ್ಷೆ ಇರಲಿದೆ. ರಾಜ್ಯಾದ್ಯಂತ ಒಟ್ಟು 8,48,203 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಪೈಕಿ 4,48, 560 ಬಾಲಕರು ಹಾಗೂ 3,99,643 ಬಾಲಕಿಯರಿದ್ದಾರೆ.


ಪರೀಕ್ಷೆಗಾಗಿ ಪೂರ್ವ ತಯಾರಿ ನಡೆಸಿರುವ ರಾಜ್ಯ ಸರ್ಕಾರ 2,879 ಪರೀಕ್ಷಾ ಕೇಂದ್ರಗಳನ್ನು ನಿರ್ಮಾಣ ಮಾಡಿದೆ. ಕೋವಿಡ್-19 (COVID -19) ಹಿನ್ನೆಲೆಯಲ್ಲಿ 330 ಬ್ಲಾಕ್ ಪರೀಕ್ಷಾ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ. ಇವುಗಳ ಪೈಕಿ 57 ಸೂಕ್ಷ್ಮ ಹಾಗೂ 4 ಅತೀ ಸೂಕ್ಷ್ಮ ಪರೀಕ್ಷಾ ಕೇಂದ್ರಗಳೆಂದು ಗುರುತಿಸಲಾಗಿದೆ.


ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ 12,674 ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 10.30ರಿಂದ ಮಧ್ಯಾಹ್ನ1.30ರವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಬರೆಯುವ ಮುನ್ನ ಪ್ರತಿ ವಿದ್ಯಾರ್ಥಿಗಳಿಗೂ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ‌‌. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 8.30ರಷ್ಟೊತ್ತಿಗೇ ಪರೀಕ್ಷಾ ಕೇಂದ್ರಕ್ಕೆ ಆಗಮಿಸುವಂತೆ ಸೂಚಿಸಲಾಗಿದೆ‌. ತಪಾಸಣೆ ವೇಳೆ ಜ್ವರ, ಕೆಮ್ಮು, ನೆಗಡಿ ಇರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ನಿಗದಿ ಮಾಡಲಾಗುತ್ತದೆ.


ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ತಪಾಸಣಾ ವ್ಯವಸ್ಥೆ ಮಾಡಲಾಗಿದೆ. 7,511 ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ. 3,209 ಪರೀಕ್ಷಾ ಕೇಂದ್ರಗಳಲ್ಲಿ 5,755 ಆರೋಗ್ಯ ತಪಾಸಣಾ ಕೇಂದ್ರ ಸ್ಥಾಪಿಸಲಾಗಿದೆ‌. ತಪಾಸಣಾ ಕಾರ್ಯಕ್ಕಾಗಿ 5,758 ಆರೋಗ್ಯ ಸಹಾಯಕರ ನಿಯೋಜನೆ ಮಾಡಲಾಗಿದೆ. ಅಲ್ಲದೆ ಪ್ರತಿ ಪರೀಕ್ಷಾ ಕೇಂದ್ರಕ್ಕೆ ಇಬ್ಬರು ಸ್ವಯಂಸೇವಕರನ್ನೂ  ನಿಯೋಜನೆ ಮಾಡಲಾಗಿದೆ. ಒಟ್ಟು 6,418 ಸ್ವಯಂಸೇವಕರನ್ನ ಆರೋಗ್ಯ ತಪಾಸಣೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಪ್ರತಿ ವಿದ್ಯಾರ್ಥಿಗೆ 2 ರಂತೆ ರಾಜ್ಯಾದ್ಯಂತ 18 ಲಕ್ಷ ಉಚಿತ ಮಾಸ್ಕ್ (Mask) ವಿತರಣೆ ಮಾಡಲಾಗಿದೆ.


ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದೆ‌.‌ ಒಂದು ಕೊಠಡಿಯಲ್ಲಿ 15 ರಿಂದ 20 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ‌. ಕಂಟೋನ್ಮೆಂಟ್ ಜೋನ್ ಗಳಲ್ಲಿ ಪರೀಕ್ಷಾ ಕೇಂದ್ರ ರದ್ದು ಮಾಡಿ ಅಲ್ಲಿನ ವಿದ್ಯಾರ್ಥಿಗಳನ್ನ ಬೇರೆ ಪರೀಕ್ಷಾ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ. ಒಟ್ಟು 12, 674 ವಿದ್ಯಾರ್ಥಿಗಳ ಪರೀಕ್ಷಾ ಕೇಂದ್ರ ಬದಲು ಮಾಡಲಾಗಿದೆ.


ಇದಲ್ಲದೆ ಎಂದಿನಂತೆ ಪರೀಕ್ಷಾ ಕೇಂದ್ರದ ಸುತ್ತಾ ಸೆಕ್ಷನ್ 144 ಹಾಗೂ 200 ಮೀಟರ್ ನಿಷೇದಾಜ್ಞೆ ಜಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.