ಸಿದ್ದಗಂಗಾ ಶ್ರೀಗಳ ಅಗಲಿಕೆಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಂಬನಿ
‘ನಡೆದಾಡುವ ದೇವರು’ ಎಂದೇ ಹೆಸರಾಗಿದ್ದ ಶ್ರೀಗಳು ತ್ರಿವಿಧ ದಾಸೋಹದಿಂದ ಲಕ್ಷಾಂತರ ಮಕ್ಕಳ ಬಾಳು ಬೆಳಗಿದರು. ಶಿಕ್ಷಣ, ಅನ್ನದಾಸೋಹದ ಅವರ ಕೈಂಕರ್ಯ ದೇಶ, ಭಾಷೆ, ಜಾತಿ, ಧರ್ಮಗಳ ಎಲ್ಲೆ ಮೀರಿ ಎಲ್ಲರಿಗೂ ಮಾದರಿಯಾಗುವಂತಹದ್ದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.
ತುಮಕೂರು: ಸಿದ್ದಗಂಗಾ ಮಠದ ಶ್ರೀಶ್ರೀಶ್ರೀ ಡಾ. ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ.
‘ನಡೆದಾಡುವ ದೇವರು’ ಎಂದೇ ಹೆಸರಾಗಿದ್ದ ಶ್ರೀಗಳು ತ್ರಿವಿಧ ದಾಸೋಹದಿಂದ ಲಕ್ಷಾಂತರ ಮಕ್ಕಳ ಬಾಳು ಬೆಳಗಿದರು. ಶಿಕ್ಷಣ, ಅನ್ನದಾಸೋಹದ ಅವರ ಕೈಂಕರ್ಯ ದೇಶ, ಭಾಷೆ, ಜಾತಿ, ಧರ್ಮಗಳ ಎಲ್ಲೆ ಮೀರಿ ಎಲ್ಲರಿಗೂ ಮಾದರಿಯಾಗುವಂತಹದ್ದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.
ನಾನು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಶ್ರೀಗಳು ಕರ್ನಾಟಕ ರತ್ನ ಪ್ರಶಸ್ತಿ ಸ್ವೀಕರಿಸಿದ ಸೌಭಾಗ್ಯ ನನ್ನದಾಗಿದ್ದು, ಇದೊಂದು ಅವಿಸ್ಮರಣೀಯ ಅನುಭವ ಎಂದು ಅವರು ಸ್ಮರಿಸಿಕೊಂಡಿದ್ದಾರೆ.
ಆ ಸಂದರ್ಭದಲ್ಲಿಯೇ ನಮ್ಮ ಸರ್ಕಾರವು ಶ್ರೀಗಳಿಗೆ ಭಾರತರತ್ನ ಪ್ರಶಸ್ತಿ ನೀಡುವಂತೆ ಶಿಫಾರಸು ಮಾಡಿತ್ತು. ಯಾವುದೇ ಭೇದ ಭಾವವಿಲ್ಲದೆ, ವಿದ್ಯಾದಾನ, ಜನರ ಶ್ರೇಯೋಭಿವೃದ್ಧಿಗಾಗಿ ಅವರು ಕೈಗೆತ್ತಿಕೊಂಡ ಸೇವಾಕಾರ್ಯಗಳು ಅನುಸರಣೀಯ. ಈ ಹಿನ್ನೆಲೆಯಲ್ಲಿ ಈಗ ಮರಣೋತ್ತರವಾಗಿಯಾದರೂ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಶ್ರೀಗಳು ಭೌತಿಕವಾಗಿ ನಮ್ಮನ್ನು ಅಗಲಿದರೂ, ಮಠದ ಸೇವಾ ಚಟುವಟಿಕೆಗಳು, ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಈ ಕಾಯಕ ಯೋಗಿ ನಮ್ಮೊಳಗೆ ಅಜರಾಮರರಾಗಿರುತ್ತಾರೆ ಎಂದು ಮುಖ್ಯಮಂತ್ರಿಗಳು ನುಡಿದಿದ್ದಾರೆ. ಕೊನೆಯ ಉಸಿರಿನವರೆಗೂ ತಾವು ನಂಬಿಕೊಂಡ ‘ಕಾಯಕವೇ ಕೈಲಾಸ’ ಎಂಬ ತತ್ವವನ್ನು ಪರಿಪಾಲಿಸಿದ ತ್ರಿವಿಧ ದಾಸೋಹಿಗೆ ನನ್ನ ಭಕ್ತಿಪೂರ್ವಕ ನಮನಗಳು. ಶ್ರೀಗಳ ಅಗಲಿಕೆಯಿಂದ ದುಃಖತಪ್ತರಾದ ಅಸಂಖ್ಯ ಭಕ್ತರು, ವಿದ್ಯಾರ್ಥಿಗಳು, ಹಿತೈಷಿಗಳು, ಮಠದ ಪರಿವಾರ ಮತ್ತು ಸಿಬ್ಬಂದಿಗೆ ಈ ನೋವನ್ನು ಸಹಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.