ಬೆಂಗಳೂರು : ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರು ದೇಶದ ಬಡ ಜನರ ಬಾಳಲ್ಲಿ ಭರವಸೆಯ ಬೆಳಕು ಮೂಡಿಸಿದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. 


COMMERCIAL BREAK
SCROLL TO CONTINUE READING

ಇಲ್ಲಿನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯವರ 100ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಇಂದಿರಾಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. 


ಇಂದಿರಾಗಾಂಧಿ ಅವರು ತಮ್ಮದೇ ಆದ ವಿನೂತನ ಆಡಳಿತ ಶೈಲಿಯ ಮೂಲಕ ಸಮ ಸಮಾಜ ಸ್ಥಾಪನೆಯ ಕನಸು ಕಂಡು, ಬದುಕಿನುದ್ದಕ್ಕೂ ಕಂಡ ಕನಸಿನ ಸಾಕಾರಕ್ಕಾಗಿ ದುಡಿದ ಧೀಮಂತ ನಾಯಕಿ. ಇಂದಿಗೂ ಅವರ ಚಿಂತನೆಗಳು ಹಾಗೂ ಸಾಧನೆಗಳು ನಮ್ಮೊಂದಿಗೆ ಜೀವಂತವಾಗಿವೆ ಎಂದು ಸಿದ್ದರಾಮಯ್ಯ ಹೇಳಿದರು .


ತಮ್ಮ ದಿಟ್ಟ ನಿರ್ಧಾರಗಳ ಮೂಲಕ ರಾಷ್ಟ್ರದ ಪ್ರಗತಿಗೆ ಹೊಸ ಆಯಾಮ ನೀಡಿದ ಇಂದಿರಾ ಗಾಂಧೀ ಅವರು ಭಾರತದ ಉಕ್ಕಿನ ಮಹಿಳೆ ಹಾಗೂ ಪ್ರಧಾನಮಂತ್ರಿಯಾಗಿ ಸದಾ ಬಡವರು, ಶೋಷಿತರು, ದುರ್ಬಲ ವರ್ಗದವರ ಏಳಿಗೆಗೆ ಶ್ರಮಿಸಿದವರು. ಅವರನ್ನು ಈ ನಾಡು ಸದಾ ಸ್ಮರಿಸುತ್ತದೆ ಎಂದು ಅವರು ಹೇಳಿದರು. 


ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಸಚಿವ ಎಸ್.ಆರ್. ಪಾಟೀಲ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಭಾಗವಹಿಸಿ ಇಂದಿರಾಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.