ಬೆಂಗಳೂರು: 2019-20ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಕಿರುಸಾಲ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉಪ ಯೋಜನೆಯಡಿ ಬಳಕೆಯಾಗದ ಅನುದಾನದಲ್ಲಿ ಸ್ತ್ರೀ ಶಕ್ತಿ ಗುಂಪುಗಳು ಆರ್ಥಿಕ ಚಟುವಟಿಕೆಯನ್ನು ಕೈಗೊಳ್ಳಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸ್ತ್ರೀ ಶಕ್ತಿ ಗುಂಪಿಗೆ 1 ಲಕ್ಷ ರೂ ಯಿಂದ 5 ಲಕ್ಷ ರೂ ಗಳವರೆಗೆ ಸಾಲವನ್ನು ಬಡ್ಡಿ ರಹಿತವಾಗಿ ನೀಡಲು ಅರ್ಜಿ ಆಹ್ವಾನಿಸಿದೆ.


COMMERCIAL BREAK
SCROLL TO CONTINUE READING

ಸ್ತ್ರೀಶಕ್ತಿ ಗುಂಪುಗಳು ಬ್ಯಾಂಕ್ ಖಾತೆಯನ್ನು ಹೊಂದಿದ್ದು ಚಾಲ್ತಿಯಲ್ಲಿರಬೇಕು. ಗುಂಪಿನ ಸದಸ್ಯರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು. ಗುಂಪು ಬೇರೆ ಯಾವುದೇ ಆರ್ಥಿಕ ಸಂಸ್ಥೆ ಬ್ಯಾಂಕುಗಳಲ್ಲಿ ಸಾಲಗಾರರಾಗಿರಬಾರದು. ಈಗಾಗಲೇ ಕಿರುಸಾಲ ಯೋಜನೆಯಡಿ ಪ್ರಯೋಜನ ಪಡೆಯದೇ ಇರುವ ಸಂಘಗಳು ಮಾತ್ರ ಸಾಲ ಪಡೆಯಲು ಅರ್ಹರಾಗಿರುತ್ತಾರೆ. ಕಿರುಸಾಲ ಯೋಜನೆಯಡಿ ಸಾಲ ಪಡೆದಿದ್ದರೆ ಇವರು ಸಾಲ ಪಡೆದು 5 ವರ್ಷಗಳಾಗಿದ್ದರೆ ಮಾತ್ರ ಸಾಲ ಪಡೆಯಬಹುದಾಗಿರುತ್ತದೆ.


ಸ್ತ್ರೀಶಕ್ತಿ ಗುಂಪು ಆರ್ಥಿಕವಾಗಿ ಸದೃಢವಾಗಿದ್ದು, ಗುಂಪಿನ ಉಳಿತಾಯ ಕನಿಷ್ಠ 1 ಲಕ್ಷ ರೂ. ಹಾಗೂ ಗರಿಷ್ಠ ರೂ. 5 ಲಕ್ಷಗಳಿರಬೇಕು. ಗುಂಪು ವ್ಯವಸ್ಥಿತ ರೀತಿಯಲ್ಲಿ ದಾಖಲೆಗಳನ್ನು ನಿರ್ವಹಿಸುತ್ತಿರಬೇಕು. ಗುಂಪು ನಿಗಮದಿಂದ ಪಡೆಯುವ ಸಾಲವನ್ನು ಗುಂಪಿನಿಂದ ಉತ್ಪಾದನಾ ಘಟಕ, ಸಣ್ಣ ಉದ್ದಿಮೆಯನ್ನು ಸ್ಥಾಪಿಸಲು ಮಾತ್ರ ಬಳಸಿಕೊಳ್ಳಬಹುದು. ಸದಸ್ಯರೆಲ್ಲರೂ ಈ ಘಟಕದ ಪಾಲುದಾರರಾಗಿತ್ತಾರೆ. ಸಾಲ ಅರ್ಜಿ ಹಾಕುವ ಸ್ತ್ರೀಶಕ್ತಿ ಗುಂಪು ತಾಲ್ಲೂಕು ಮಟ್ಟದ ಒಕ್ಕೂಟ ಸದಸ್ಯತ್ವ ಪ್ರತಿ ನೊಂದಾವಣಿಯಾಗಿರಬೇಕು.


ಅರ್ಹ ಸ್ತ್ರೀಶಕ್ತಿ ಗುಂಪುಗಳು ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಿಂದ ಅರ್ಜಿಗಳನ್ನು ಉಚಿತವಾಗಿ ಪಡೆದು, ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಸಂಬಂಧಿಸಿದ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಗೆ ಜುಲೈ 31 ರೊಳಗೆ ದ್ವಿ-ಪ್ರತಿಯಲ್ಲಿ ಸಲ್ಲಿಸಬೇಕು.


ಹೆಚ್ಚಿನ ವಿವರಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿ ಮತ್ತು ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿ.