ಡಿಸೆಂಬರ್‌ನಲ್ಲಿ ಮಧ್ಯಂತರ ಚುನಾವಣೆ: ಸಿದ್ದರಾಮಯ್ಯ ಭವಿಷ್ಯ
ರಾಜಕೀಯ ಮೌಲ್ಯ, ತತ್ವಾದರ್ಶಗಳೇ ಇಲ್ಲದವರು ಸರ್ಕಾರ ರಚನೆ ಮಾಡಿದರೆ ಅಂತಹ ಸರ್ಕಾರ ಸ್ಥಿರವಾಗಿರಲು ಸಾಧ್ಯವೇ? ಮಾಜಿ ಸಿಎಂ ಸಿದ್ದರಾಮಯ್ಯ
ಮೈಸೂರು: ಡಿಸೆಂಬರ್‌ನಲ್ಲಿ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆ ಇದೇ ಎಂದು ಭವಿಷ್ಯ ನುಡಿದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ಕಾರ್ಯಕರ್ತರು ಚುನಾವಣೆಗೆ ಈಗಿನಿಂದಲೇ ತಯಾರಿ ಮಾಡಿಕೊಳ್ಳುವಂತೆ ಕರೆ ನೀಡಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು. ಈ ಸರ್ಕಾರ ಹೆಚ್ಚು ಧಿನ ಉಳಿಯುವುದಿಲ್ಲ ಎಂದು ಯಡಿಯೂರಪ್ಪ ಸರ್ಕಾರ ರಚಿಸಿದಾಗಲೇ ಹೇಳಿದ್ದೇ. ಬಿಜೆಪಿಯವರು ವಾಮಮಾರ್ಗವಾಗಿ 17 ಜನ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಹೈಜಾಕ್ ಮಾಡಿ ಬಿಜೆಪಿ ಸರ್ಕಾರ ರಚನೆ ಮಾಡಿದ್ದರು. ಆದರೆ ಅತೃಪ್ತರ ಬೆಂಬಲ ಪಡೆದು ರಚಿಸಲಾಗಿರುವ ಈ ಸರ್ಕಾರ ಖಂಡಿತಾ ಮೂರುವರೆ ವರ್ಷ ಪೂರ್ಣಗೊಳಿಸುವುದಿಲ್ಲ ಎಂದು ಹೇಳಿದ್ದೆ ಎಂಬ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದರು.
ರಾಜಕೀಯ ಮೌಲ್ಯ, ತತ್ವಾದರ್ಶಗಳೇ ಇಲ್ಲದವರು ಸರ್ಕಾರ ರಚನೆ ಮಾಡಿದರೆ ಅಂತಹ ಸರ್ಕಾರ ಸ್ಥಿರವಾಗಿರಲು ಸಾಧ್ಯವೇ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, 'ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದ್ದು, ನೂತನ ಸರ್ಕಾರ ರಚನೆಯಾಗಿ ತಿಂಗಳು ಕಳೆದರೂ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಿಸಿದ್ದು, ಸಿಎಂ ಯಡಿಯೂರಪ್ಪ ಅದನ್ನು ಶಮನ ಮಾಡುವುದರಲ್ಲಿ ಬ್ಯುಸಿ ಆಗಿದ್ದಾರೆ' ಎಂದು ವಾಗ್ಧಾಳಿ ನಡೆಸಿದರು.
ನಿನ್ನೆ ಮಂಗಳೂರಿನ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ಉಪಚುನಾವಣೆಗೆ ತಯಾರಾಗಿದ್ದೇವೆ, ಮಧ್ಯಂತರ ಚುನಾವಣೆಗೂ ತಯಾರಾಗಿ ಎಂದು ನಮ್ಮ ಕಾರ್ಯಕರ್ತರಿಗೆ ತಿಳಿಸಿದ್ದರು. ಅಲ್ಲದೇ ಈ ಸರ್ಕಾರ ನೋಡಿದ್ರೆ ಹೆಚ್ಚು ದಿನ ನಿಲ್ಲುವ ಹಾಗೆ ಕಾಣುತ್ತಿಲ್ಲ, ಅದಕ್ಕೆ ಡಿಸೆಂಬರ್‌ಗೆ ಸಾರ್ವತ್ರಿಕ ಚುನಾವಣೆ ಬರುತ್ತೆ, ಸಿದ್ಧರಾಗಿ ಎಂದಿದ್ದರು.