ಉಡುಪಿ : ಅನಾರೋಗ್ಯದಿಂದ ಕಳೆದ ಎರಡು ದಿನಗಳ ಹಿಂದೆ ಮೃತಪಟ್ಟಿದ್ದ ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಅಂತ್ಯಕ್ರಿಯೆ ಇಂದು ಕುಂದಾಪುರದ ಯಡಾಡಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. 


COMMERCIAL BREAK
SCROLL TO CONTINUE READING

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಯಡಾಡಿಯ ಮನೆಯ ಅಡಿಕೆ ತೋಟದಲ್ಲಿ ಮಧುಕರ್ ಅಂತ್ಯಕ್ರಿಯೆ ನಡೆದಿದ್ದು, ತಂದೆ-ತಾಯಿ ಸಮಾಧಿ ಪಕ್ಕದಲ್ಲೇ ಚಿತೆ ಸಿದ್ಧಪಡಿಸಲಾಗಿತ್ತು. ತುಳುನಾಡಿನ ಬಂಟ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು. ಮಧುಕರ ಶೆಟ್ಟಿ ಅವರ ಸಹೋದರ ಮುರಳೀಧರ ಶೆಟ್ಟಿ ಚಿತೆಗೆ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತ್ಯ ಸಂಸ್ಕಾರ ನೆರವೇರಿಸಿದರು. 


ಅಂತ್ಯಕ್ರಿಯೆಯ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ನೂರಾರು ಮಂದಿ ಸ್ಥಳೀಯರು ಕಣ್ಣೀರಿಟ್ಟರು. ಪೊಲೀಸ್‌ ಅಧಿಕಾರಿಗಳೂ ಸಹುದ್ಯೋಗಿಯನ್ನು ನೆನೆದು ಕಣ್ಣೀರಿಟ್ಟರು. ಜಿಲ್ಲಾಡಳಿತ ಅಂತ್ಯಕ್ರಿಯೆ ಸಕಲ ವ್ಯವಸ್ಥೆಗಳನ್ನು ಮಾಡಿತ್ತು. ಸಚಿವ ಯು.ಟಿ.ಖಾದರ್‌,  ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸೇರಿದಂತೆ ಗಣ್ಯರು ಅಂತಿಮ ನಮನ ಸಲ್ಲಿಸಿದರು. ಸಾವಿರಾರು ಜನರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.


ಅನಾರೋಗ್ಯದಿಂದ ಬಳಲುತ್ತಿದ್ದ ಕರ್ನಾಟಕದ ಸಿಂಗಂ ಎಂದೇ ಹೆಸರಾಗಿದ್ದ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ (47) ಅವರು ಹೈದರಾಬಾದ್ ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಡಿಸೆಂಬರ್ 28ರಂದು ಮೃತಪಟ್ಟಿದ್ದರು. ಇವರು ಹೈದರಾಬಾದ್ ನ ರಾಷ್ಟ್ರೀಯ ಪೋಲೀಸ್ ಅಕಾಡಮಿಯಲ್ಲಿ ಉಪನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.


ಖ್ಯಾತ ಪತ್ರಕರ್ತ ದಿ. ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಪುತ್ರರಾಗಿದ್ದ ಮಧುಕರ್ 1999ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದರು. ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಿಂದ ಸಮಾಜಶಾಸ್ತ್ರದಲ್ಲಿ ಎಂಎ ಹಾಗೂ ನ್ಯೂಯಾರ್ಕ್ ವಿವಿನಲ್ಲಿ ಪಿಎಚ್ ಡಿ ಪದವಿ ಗಳಿಸಿದ್ದರು. ಚಿಕ್ಕಮಗಳೂರು ಎಸ್ಪಿ ಹಾಗೂ ಲೋಕಾಯುಕ್ತ ಎಸ್ಪಿಯಾಗಿ ಖಡಕ್ ಅಧಿಕಾರಿ ಎಂದು ಗುರುತಿಸಿಕೊಂಡಿದ್ದ ಮಧುಕರ್ ಶೆಟ್ಟಿ ಜನಾನುರಾಗಿಯಾಗಿದ್ದರು.