ತೃತೀಯ ರಂಗದ ಪ್ರಧಾನಿ ಅಭ್ಯರ್ಥಿಯಾಗಿ ಹೆಚ್.ಡಿ.ದೇವೇಗೌಡ?
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜೀವನಾಧಾರಿತ `ನಮ್ಮೂರ ದ್ವಾವಪ್ಪ` ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಹೆಚ್.ವಿಶ್ವನಾಥ್ ಮಾತನಾಡಿದರು.
ಹಾಸನ: ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಈ ಹಿಂದೆ ಪ್ರಧಾನಿಯಾಗಿದ್ದರು. ಆದರೆ ಮುಂದೆಯೂ ಪ್ರಧಾನಿ ಆಗುವ ಯೋಗ್ಯತೆ ಇರುವುದು ದೇವೇಗೌಡರಿಗೆ ಮಾತ್ರ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜೀವನಾಧಾರಿತ 'ನಮ್ಮೂರ ದ್ವಾವಪ್ಪ' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಪ್ರಧಾನಿಯಾಗಲು ಇನ್ಯಾರೂ ನಾಯಕರಿಲ್ಲ ಎಂದು ಮೋದಿ ಹೇಳುತ್ತಾರೆ. ಮೋದಿಯವರೇ ಉತ್ತರ ಭಾರತವನ್ನೇ ನೋಡಬೇಡಿ. ದಕ್ಷಿಣ ಭಾರತವನ್ನು ನೋಡಿ. ಜಾತ್ಯಾತೀತ ಪಕ್ಷಗಳ ನಾಯಕತ್ವವನ್ನು ದೆಹಲಿಯಲ್ಲಿ ದೇವೇಗೌಡರು ವಹಿಸಿಕೊಂಡಿದ್ದಾರೆ. 130 ಕೋಟಿ ಜನರಿಗೆ ಸ್ಪಂದಿಸುವ, ಜನರ ನೋವನ್ನು ಅರಿತಿರುವ ಏಕೈಕ ವ್ಯಕ್ತಿ ಅಂದರೆ ಅದು ದೇವೇಗೌಡರು ಮಾತ್ರ ಎಂದು ವಿಶ್ವನಾಥ್ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಹೆಚ್.ವಿಶ್ವನಾಥ್ ಅವರು ಹೇಳಿದ ಪ್ರತಿಯೊಂದು ಮಾತುಗಳೂ ಹೆಚ್.ಡಿ.ದೇವೇಗೌಡರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಸುಳಿವು ನೀಡಿದಂತಿತ್ತು. ಹಾಗಿದ್ದರೆ ಹೆಚ್.ಡಿ.ದೇವೇಗೌಡರು 2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರಾ? ತೃತೀಯ ರಂಗದ ನಾಯಕತ್ವ ವಹಿಸಲಿದ್ದಾರಾ? ಮುಂದಿನ ಪ್ರಧಾನಿ ಅಭ್ಯರ್ಥಿ ಆಗಲಿದ್ದಾರಾ? ಎಂಬದನ್ನು ಕಾದು ನೋಡಬೇಕಿದೆ.