ಸೋನಿಯಾ ಗಾಂಧಿಯೇನು ಬಸಪ್ಪನ ಮಗಳಾ?
ಸೋನಿಯಾ ಗಾಂಧಿ ಬಳ್ಳಾರಿಯಲ್ಲಿ ಚುನಾವಣೆಗೆ ನಿಂತಿದ್ರು, ಹಾಗಂತ ಅವರೇನು ಬಸಪ್ಪನ ಮಗಳಾ? ಎಂದು ಕಾಂಗ್ರೆಸ್ ವಿರುದ್ಧ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಹೊಸಪೇಟೆ: ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಅವರನ್ನು ಹೊರ ರಾಜ್ಯದವರು ಎಂದು ಟೀಕಿಸುತ್ತಿರುವ ಬೆನ್ನಲ್ಲೇ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಕಿಡಿ ಕಾರಿದ್ದಾರೆ.
ನಗರದ ಸಹಕಾರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎಲ್ಲರೂ ನಮ್ಮ ಅಭ್ಯರ್ಥಿ ಶಾಂತಾ ಅವರನ್ನು ಹೊರಗಿನವರು ಎಂದು ಟೀಕಿಸುತ್ತಿದ್ದಾರೆ. ಹಾಗಾದರೆ ಸೋನಿಯಾ ಗಾಂಧಿ ಬಳ್ಳಾರಿಯಲ್ಲಿ ಚುನಾವಣೆಗೆ ನಿಂತಿದ್ರು, ಹಾಗಂತ ಅವರೇನು ಬಸಪ್ಪನ ಮಗಳಾ? ಇಂದಿರಾಗಾಂಧಿ ಚಿಕ್ಕಮಗಳೂರಿನಲ್ಲಿ ಎಲೆಕ್ಷನ್ ಗೆ ನಿಂತಿದ್ರು, ಅವರೇನು ಗೌಡನ ಮಗಳಾ? ಎಂದು ಕಾಂಗ್ರೆಸ್ ವಿರುದ್ಧ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿದ ಅವರು, ಪ್ರತಿ ಬಾರಿ ರಾಹುಲ್ ಗಾಂಧಿ ರಾಜ್ಯಕ್ಕೆ ಬಂದು ಚುನಾವಣಾ ಪ್ರಚಾರ ಮಾಡಿದಾಗಲೆಲ್ಲಾ ಕಾಂಗ್ರೆಸ್ ಹಿನ್ನಡೆ ಸಾಧಿಸಿದೆ. ಕಳೆದ ಬಾರಿ ಶಿವಮೊಗ್ಗಕ್ಕೆ ಬಂದು ಅವರು ಪ್ರಚಾರ ಮಾಡಿದ್ದರಿಂದ ನಾನು ಲಕ್ಷ ಮತಗಳ ಅಂತರದಿಂದ ಗೆದ್ದೆ. ಹಾಗೇ ಈಗ ಬಳ್ಳಾರಿಯಲ್ಲಿ ಬಂದು ಪ್ರಚಾರ ಮಾಡಲಿ, ನಮ್ಮ ಅಭ್ಯರ್ಥಿಗೆ ಗೆಲುವು ಸಿಗಲಿ ಎಂದು ಈಶ್ವರಪ್ಪ ಟೀಕಿಸಿದರು.