ರಾಜ್ಯಕ್ಕೂ ಕಾಲಿಟ್ಟಿದೆಯೇ ಮಹಾಮಾರಿ ಕರೋನಾ ವೈರಸ್?
ಹುಬ್ಬಳ್ಳಿಯಲ್ಲಿ ಚೀನಾದಿಂದ ಮರಳಿದ್ದ ವ್ಯಕ್ತಿಯೊಬ್ಬರಿಗೆ ಕರೋನಾ ವೈರಸ್ ಸೋಂಕು ಇರುವ ಬಗ್ಗೆ ವರದಿಯಾಗಿತ್ತು.
ಮೈಸೂರು: ರಾಜ್ಯದಲ್ಲಿಯೂ ಕರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ ಎಂಬ ಆಘಾತಕಾರಿ ಸುದ್ದಿ ಜನತೆಯನ್ನು ತಲ್ಲಣಗೊಳಿಸಿದೆ. ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿರುವ ಆರೋಗ್ಯ ಸಚಿವ ಬಿ. ಶ್ರೀರಾಮುಲು ಕರ್ನಾಟಕದಲ್ಲಿ ಈವರೆಗೂ ಒಂದೂ ಕರೋನಾ ವೈರಸ್(Corona Virus) ಪತ್ತೆಯಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಸೋಮವಾರ ಮೈಸೂರಿನಲ್ಲಿ ಮಾರಣಾಂತಿಕ ಕರೋನಾ ವೈರಸ್ ರಾಜ್ಯದಲ್ಲಿ ಕಾಲಿಟ್ಟಿಲ್ಲ ಎಂದು ಸ್ಪಷ್ಟನೆ ನೀಡಿರುವ ಅರೋಗ್ಯ ಸಚಿವರು, ಕರೋನಾ ವೈರಸ್ ಹರಡದಂತೆ ರಾಜ್ಯದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ವಿದೇಶದಿಂದ ಬಂದಿದ್ದ 44 ಮಂದಿ ಪ್ರವಾಸಿಗರ ರಕ್ತ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 29 ಮಂದಿಯ ರಕ್ತ ಪರೀಕ್ಷೆಯಲ್ಲಿ ಕರೋನಾ ವೈರಸ್ ನೆಗೆಟಿವ್ ಎಂಬ ವರದಿ ಬಂದಿದೆ.
ಉಳಿದವರ ರಕ್ತ ಪರೀಕ್ಷೆ ನಡೆಯುತ್ತಿದೆ ಎಂದು ತಿಳಿಸಿದರು.
ಕರೋನಾ ವೈರಸ್ ರೋಗಿಗಳ ಚಿಕಿತ್ಸಾ ವೆಚ್ಚ ಬರಿಸಲು ಸರ್ಕಾರ ಸಿದ್ಧ:
ಒಂದೊಮ್ಮೆ ರಾಜ್ಯದಲ್ಲಿ ಕರೋನಾ ವೈರಸ್ ಪತ್ತೆಯಾದರೆ ಅದಕ್ಕಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ.
ಹತ್ತು ಹಾಸಿಗೆವುಳ್ಳ ವಾರ್ಡ್‌ಗಳನ್ನು ಅಂತಹವರ ಚಿಕಿತ್ಸೆಗೆ ಮೀಸಲು ಇಡಲಾಗಿದೆ. ಈವರೆಗೂ ರಾಜ್ಯದಲ್ಲಿ ಒಂದು ಕರೋನಾ ಪ್ರಕರಣ ದಾಖಲಾಗಿಲ್ಲ. ಕಂಡು ಬಂದಲ್ಲಿ ಔಷಧಿಯನ್ನ ಹೊರ ದೇಶದಿಂದ ತರಿಸಲು ಸಿದ್ಧರಿದ್ದೇವೆ. ರೋಗಿಗಳ ಚಿಕಿತ್ಸಾ ವೆಚ್ಚ ಬರಿಸಲು ಸರ್ಕಾರ ಸಿದ್ಧವಿದೆ ಎಂದು ಶ್ರೀರಾಮುಲು ಭರವಸೆ ನೀಡಿದರು.
ಕರೋನಾ ವೈರಸ್ ಗೆ ಆಯುರ್ವೇದದಲ್ಲಿ ಔಷಧ:
ಇದೇ ಸಂದರ್ಭದಲ್ಲಿ ಕರೋನಾ ವೈರಸ್(Corona Virus)ಗೆ ಆಯುರ್ವೇದದಲ್ಲಿ ಔಷಧವಿದೆ ಎಂದು ಮಾಹಿತಿ ನೀಡಿದ ಅರೋಗ್ಯ ಸಚಿವ ಶ್ರೀರಾಮುಲು, ಚೀನಾದಿಂದ ಬರುವ ಪ್ರವಾಸಿಗರಿಗೆ ವಿಮಾನ ನಿಲ್ದಾಣಗಳಲ್ಲಿ ಔಷಧಿ ಸಿಂಪಡಿಸಿ ಬರಮಾಡಿಕೊಳ್ಳಲು ಸಿದ್ಧತೆ ಮಾಡಿಕ್ಕೊಂಡಿದ್ದೇವೆ ಎಂದು ತಿಳಿಸಿದರು.
ಹುಬ್ಬಳ್ಳಿಯಲ್ಲಿ ಕರೋನಾ ವೈರಸ್ ಭೀತಿ:
ಏತನ್ಮಧ್ಯೆ, ಹುಬ್ಬಳ್ಳಿಯಲ್ಲಿ ಕರೋನಾ ವೈರಸ್ ಭೀತಿ ಮನೆಮಾಡಿದ್ದು, ಚೀನಾದಿಂದ ಮರಳಿದ್ದ ವ್ಯಕ್ತಿಯೊಬ್ಬನಿಗೆ ಕರೋನಾ ವೈರಸ್ ಲಕ್ಷಣಗಳು ಪತ್ತೆಯಾಗಿದೆ ಎಂದು ವರದಿಯಾಗಿದೆ. ಸದ್ಯ ಸೋಂಕಿತ ವ್ಯಕ್ತಿಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಕರೋನಾ ಸೋಂಕಿತರ ಚಿಕಿತ್ಸಾ ವಾರ್ಡ್‌ಗೆ ದಾಖಲಿಸಲಾಗಿದ್ದು, ಆ ವ್ಯಕ್ತಿಯ ರಕ್ತದ ಮಾದರಿ ಸಂಗ್ರಹಿಸಿ ಪುಣೆಯ ಲ್ಯಾಬ್‌ಗೆ ರವಾನಿಸಲಾಗಿದೆ. ಅತಿಯಾದ ಜ್ವರ, ಕೆಮ್ಮು, ತಲೆಸುತ್ತಿನಿಂದ ಬಳಲುತ್ತಿರುವ ವ್ಯಕ್ತಿ ಕಳೆದ ತಿಂಗಳು ಚೀನಾದಿಂದ ಹುಬ್ಬಳ್ಳಿಗೆ ಮರಳಿದ್ದರು ಎನ್ನಲಾಗಿದೆ.
ಕಿಮ್ಸ್‌ನಲ್ಲಿ ಕರೋನಾ ರೋಗಿಗಳ ಪ್ರತ್ಯೇಕ ವಾರ್ಡ್:
ಮುನ್ನೆಚ್ಚರಿಕಾ ಕ್ರಮವಾಗಿ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಕರೋನಾ ರೋಗಿಗಳಿಗಾಗಿ 10 ಹಾಸಿಗೆಗಳ ಪ್ರತ್ಯೇಕ ವಾರ್ಡ್ ಸಿದ್ಧಪಡಿಸಲಾಗಿದ್ದು, ಅಗತ್ಯ ಔಷಧಿಗಳನ್ನು ಸಂಗ್ರಹಿಸಿಕೊಳ್ಳಲಾಗಿದೆ ಎಂದು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಹೇಳಿಕೆ ನೀಡಿದ್ದಾರೆ.