ಬೆಂಗಳೂರು: ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರಿಗೆ ಜಾಮೀನು ಸಿಕ್ಕಿರುವುದು ನ್ಯಾಯಕ್ಕೆ ಸಿಕ್ಕ ಜಯ ಎಂದು ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಟ್ವೀಟ್ ಮಾಡಿರುವ ಅವರು,  ಡಿ.ಕೆ.ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವುದು ನನಗೆ ಸಂತೋಷ ಉಂಟುಮಾಡಿದೆ. ದ್ವೇಷ ರಾಜಕಾರಣದ ಉದ್ದೇಶದಿಂದ ಪ್ರಕರಣವು ತನಿಖಾ ಹಂತದಲ್ಲಿರುವಾಗಲೇ ಅವರನ್ನು ಬಂಧಿಸುವ ಮೂಲಕ ಕಾನೂನು ಉಲ್ಲಂಘನೆ ಮಾಡಲಾಗಿತ್ತು. ಅವರಿಗೆ ಜಾಮೀನು ದೊರೆತಿರುವುದು ನ್ಯಾಯಕ್ಕೆ ದೊರೆತ ಜಯ" ಎಂದಿದ್ದಾರೆ.



ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯ ಡಿಕೆಶಿ ಜಾಮೀನು ಅರ್ಜಿಯನ್ನು ರದ್ದು ಪಡಿಸಿತ್ತು. ಬಳಿಕ ಈ ಆದೇಶವನ್ನು ಪ್ರಶ್ನಿಸಿ ಡಿ.ಕೆ. ಶಿವಕುಮಾರ್ ದೆಹಲಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದರು. ಡಿಕೆಶಿ ಪರ ಹಿರಿಯ ವಕೀಲ ಅಭಿಷೇಕ್​ ಮನು ಸಿಂಘ್ವಿ ಹಾಗೂ ಜಾರಿ ನಿರ್ದೇಶನಾಲಯ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್​ ವಾದ ಮಂಡಿಸಿದ್ದರು. ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟಾ ಈ ಅರ್ಜಿ ವಿಚಾರಣೆ ನಡೆಸಿ ಅಕ್ಟೋಬರ್ 17ರಂದು ತೀರ್ಪುನ್ನು ಕಾಯ್ದಿರಿಸಿದ್ದರು. 


ಅದರಂತೆ ಇಂದು ತೀರ್ಪು ಪ್ರಕಟಿಸಿರುವ ದೆಹಲಿ ಹೈಕೋರ್ಟ್, ವಿಚಾರಣೆ ಮುಗಿಯುವವರೆಗೆ ದೇಶ ಬಿಟ್ಟು ಹೋಗುವಂತಿಲ್ಲ, 25 ಲಕ್ಷ ಬಾಂಡ್ ಹಾಗೂ ಇಬ್ಬರ ಶೂರಿಟಿಯೊಂದಿಗೆ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.