ಕೇಂದ್ರ ಗೃಹ ಸಚಿವಾಲಯವನ್ನು ಕ್ಲೀನ್ ಚಿಟ್ಸ್ ಸಚಿವಾಲಯ ಎಂದು ನಾಮಕರಣ ಮಾಡುವುದು ಉತ್ತಮ -ಪ್ರಿಯಾಂಕ ಖರ್ಗೆ
ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಕಾಂಗ್ರೆಸ್ ನಾಯಕ ಪ್ರಿಯಾಂಕ ಖರ್ಗೆ ಕೇಂದ್ರ ಗೃಹ ಸಚಿವಾಲಯವನ್ನು ಕ್ಲೀನ್ ಚಿಟ್ಸ್ ಸಚಿವಾಲಯ ಎಂದು ಮರು ನಾಮಕರಣ ಮಾಡುವುದು ಉತ್ತಮ ಎಂದು ಟ್ವೀಟ್ ಮಾಡಿದ್ದಾರೆ.
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಕಾಂಗ್ರೆಸ್ ನಾಯಕ ಪ್ರಿಯಾಂಕ ಖರ್ಗೆ ಕೇಂದ್ರ ಗೃಹ ಸಚಿವಾಲಯವನ್ನು ಕ್ಲೀನ್ ಚಿಟ್ಸ್ ಸಚಿವಾಲಯ ಎಂದು ಮರು ನಾಮಕರಣ ಮಾಡುವುದು ಉತ್ತಮ ಎಂದು ಟ್ವೀಟ್ ಮಾಡಿದ್ದಾರೆ.
ಮೊದಲ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಕೇಂದ್ರ ಗೃಹ ಸಚಿವರಾಗಿ ಅಮಿತ್ ಷಾ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿನ್ನಲೆಯಲ್ಲಿ ಈಗ ಷಾ ನೇಮಕವನ್ನು ವ್ಯಂಗ್ಯವಾಡಿರುವ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ " ನಾವು ಈಗ ನೂತನ ಗೃಹ ಸಚಿವರನ್ನು ಹೊಂದಿದ್ದೇವೆ. ಈಗ ಗೃಹ ಸಚಿವಾಲಯವನ್ನು ಕ್ಲೀನ್ ಚಿಟ್ಸ್ ನೀಡುವ ಸಚಿವಾಲಯ ಎಂದು ಮರು ನಾಮಕರಣ ಮಾಡುವುದು ಉತ್ತಮವೆಂದು " ಟ್ವೀಟ್ ಮಾಡಿದ್ದಾರೆ.
ಈ ಹಿಂದಿನ ಮೋದಿ ಸರ್ಕಾರದಲ್ಲಿ ರಾಜನಾಥ್ ಸಿಂಗ್ ಅವರು ನಿರ್ವಹಿಸುತ್ತಿದ್ದ ಗೃಹ ಇಲಾಖೆಯನ್ನು ಈಗ ಅಮಿತ್ ಷಾ ಅವರಿಗೆ ಹಸ್ತಾಂತರಿಸಲಾಗಿದೆ. ವಿಶೇಷವೆಂದರೆ ಈ ಹಿಂದೆ ಇದೇ ಇಲಾಖೆಯನ್ನು ಷಾ ಅವರು ಮೋದಿ ಗುಜರಾತಿನಲ್ಲಿ ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ನಿರ್ವಹಿಸಿದ್ದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಬಿಜೆಪಿ ಗೆಲುವಿಗೆ ಕಾರ್ಯತಂತ್ರ ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ.ಈ ಹಿಂದೆ ಷಾ 2010 ರಲ್ಲಿ ಸೊಹ್ರಾಬುದ್ದೀನ್ ಶೇಕ್ ಎನ್ಕೌಂಟರ್ ಪ್ರಕರಣದಲ್ಲಿ ಸೆರೆಮನೆವಾಸ ಅನುಭವಿಸಿದ್ದರು.