ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ‌‌ ಸಚಿವ ಸಿ.ಟಿ ರವಿ ಅವರು ನಾಡಧ್ವಜ ವಿರೋಧಿಸಿರುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಸಚಿವ ಸಿ.ಟಿ. ರವಿ ನಾಡಧ್ವಜ ವಿರೋಧಿಸಿರುವುದು ಸರಿಯಲ್ಲ. ನಾವು ಪ್ರತ್ಯೇಕ ಧ್ವಜ ಕೇಳುತ್ತಿಲ್ಲ.‌‌ ರಾಜ್ಯಗಳು ತಮ್ಮದೇ ಧ್ವಜ ಹೊಂದಲು ಸಂವಿಧಾನ ಇಲ್ಲವೇ ಕಾನೂನಿನಲ್ಲಿ ಯಾವ ಅಡ್ಡಿಯೂ ಇಲ್ಲ.‌ ರಾಜ್ಯ ಬಿಜೆಪಿ ಸರ್ಕಾರದ ನಿಲುವು ಸ್ಪಷ್ಟವಾಗಿ ಕನ್ನಡ ವಿರೋಧಿಯಾದುದ್ದು ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ನಾಡಧ್ವಜವನ್ನು ರಾಜ್ಯ ಸರ್ಕಾರವೇ ವಿರೋಧಿಸುತ್ತಿರುವುದು ಖಂಡನೀಯ:
ನಾವು ನಮಗೊಂದು ನಾಡಗೀತೆಯನ್ನು‌ ಒಪ್ಪಿಕೊಂಡಿಲ್ಲವೇ? ಇದರಿಂದ ರಾಷ್ಟ್ರಗೀತೆಗೆ ಅವಮಾನ ಮಾಡಿದಂತಾಗುವುದೇ? ರಾಷ್ಟ್ರಧ್ವಜದ ಕೆಳಗೆ ಬೇರೆ ಧ್ವಜ ಹಾರಿಸಬೇಕೆಂದು ರಾಷ್ಟ್ರಧ್ವಜ ಸಂಹಿತೆ ಹೇಳಿದೆ. ಅದನ್ನು ಪಾಲಿಸಬೇಕಾಗಿರುವುದು ನಮ್ಮೆಲ್ಲರ‌ ಕರ್ತವ್ಯ. ಬೇರೇನು ಸಮಸ್ಯೆ ಇದೆ? ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿರುವ ಸಿದ್ದರಾಮಯ್ಯ, ಹಿರಿಯರಾದ ಡಾ.ಪಾಟೀಲ ಪುಟ್ಟಪ್ಪ ಮತ್ತಿತರ ಕನ್ನಡ ಹೋರಾಟಗಾರರು ನಾಡಧ್ವಜಕ್ಕಾಗಿ ಮನವಿ‌ ಮಾಡಿದ್ದರು. ಆ ಬಗ್ಗೆ ಅಧ್ಯಯನ ನಡೆಸಿದ್ದ ತಜ್ಞರ ಸಮಿತಿ ವಿನ್ಯಾಸಗೊಳಿಸಿದ್ದ ನಾಡಧ್ವಜಕ್ಕೆ ಮನ್ನಣೆ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಕೋರಿದ್ದೆವು. ಈಗ ರಾಜ್ಯ ಸರ್ಕಾರವೇ ವಿರೋಧಿಸುತ್ತಿರುವುದು ಖಂಡನೀಯ ಎಂದರು.


ಕನ್ನಡ ಮತ್ತು ಸಂಸ್ಕೃತಿ ಸಚಿವರು ನಾಡಧ್ವಜ ಅಗತ್ಯ ಇಲ್ಲ‌ ಎಂದು ಹೇಳಿ‌ ಕನ್ನಡಿಗರನ್ನು ಕೆರಳಿಸಿರುವುದು ಸರಿ ಅಲ್ಲ. ಮಾಡಬೇಕಾಗಿರುವ ಕೆಲಸ ಬಿಟ್ಟು ಸಚಿವರು ಅನಗತ್ಯವಾಗಿ ವಿವಾದ ಸೃಷ್ಟಿಸಲು ಹೊರಟಂತಿದೆ. ಸಚಿವರು ತಕ್ಷಣ ತಮ್ಮ ಅಭಿಪ್ರಾಯವನ್ನು ಹಿಂದಕ್ಕೆ ಪಡೆದು ನಾಡಧ್ವಜವನ್ನು ಒಪ್ಪಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.