ಬೆಂಗಳೂರು: ಲೋಕಸಭಾ ಚುನಾವಣೆ ಹೊತ್ತಲ್ಲಿಯೇ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಪ್ತ, ರಾಜ್ಯ ಪ್ರಭಾವಿ ಸಚಿವ ಸಿ.ಎಸ್. ಪುಟ್ಟರಾಜು ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ಇಂದು ಬೆಳ್ಳಂಬೆಳಗ್ಗೆ ಬೆಂಗಳೂರು, ಮಂಡ್ಯ ಮತ್ತು ಮೈಸೂರು ಸೇರಿದಂತೆ 15ಕ್ಕೂ ಹೆಚ್ಚು ಸ್ಥಳಗಳಲ್ಲಿ ಐಟಿ ರೇಡ್ ನಡೆದಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರುಳಿಯಲ್ಲಿರುವ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಅವರ ಮನೆ, ಮೈಸೂರಿನಲ್ಲಿರುವ ಅವರ ಅಣ್ಣನ ಮಗ ಅಶೋಕ್ ಎಂಬುವರ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.


ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿ ನೀಡದೆ ಕೇಂದ್ರ ಮೀಸಲು ಪಡೆ(ಸಿಆರ್ ಪಿಎಫ್) ಸಿಬ್ಬಂದಿಗಳ ನೆರವು ಪಡೆದು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.


ದಾಳಿ ಬಗ್ಗೆ ಬುಧವಾರ ರಾತ್ರಿಯೇ ಸುಳಿವು ನೀಡಿದ್ದ ಸಿಎಂ:
ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಬಿಜೆಪಿಯೇತರ ಪಕ್ಷಗಳ ಮೇಲೆ ಐಟಿ ದಾಳಿಗೆ ಮುಂದಾಗಿದೆ. ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆಯನ್ನು ಬಳಸಿಕೊಂಡು ರಾಜ್ಯದ ಕೆಲವು ಪ್ರಭಾವಿ ವ್ಯಕ್ತಿಗಳ ಮನೆ ಮೇಲೆ ಐಟಿ ದಾಳಿ ನಡೆಸಲಿದೆ. ನಾಳೆ ಬೆಳಿಗ್ಗೆ 300 ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕರ್ನಾಟಕದಲ್ಲಿ ದಾಳಿ ನಡೆಸಲಿದ್ದಾರೆ. ಐಟಿ ಅಧಿಕಾರಿಗಳು ಕೇಂದ್ರ ಸರ್ಕಾರದ ಏಜೆಂಟ್​ಗಳಾಗಿ ವರ್ತಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬುಧವಾರ ರಾತ್ರಿಯೇ ಸುಳಿವು ನೀಡಿದ್ದರು.