ಬೆಂಗಳೂರು: ಆ್ಯಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮಾಜಿ ಸಚಿವ ಜನಾರ್ಧನ ರೆಡ್ಡಿಗೆ ಕಡೆಗೂ ಜಾಮೀನು ಮಂಜೂರಾಗಿದೆ. 


COMMERCIAL BREAK
SCROLL TO CONTINUE READING

ಜನಾರ್ಧನ ರೆಡ್ಡಿ ಪರ ವಕೀಲರಾದ ಚಂದ್ರಶೇಖರ್ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನಗರದ 1ನೇ ಎಸಿಎಂಎಂ ನ್ಯಾಯಾಲಯ ಕಡೆಗೂ ಜಾಮೀನು ಮಂಜೂರು ಮಾಡಿದೆ. ಇಬ್ಬರ ಶೂರಿಟಿ ಮತ್ತು ಒಂದು ಲಕ್ಷ ರೂ. ಬಾಂಡ್​ನೊಂದಿಗೆ ಜಾಮೀನು ಮಂಜೂರು ಮಾಡಲಾಗಿದ್ದು, ನಾಲ್ಕು ದಿನಗಳ ಕಾರಾಗೃಹ ವಾಸದಿಂದ ರೆಡ್ಡಿ ಹೊರಬಂದಿದ್ದಾರೆ.


ಸತ್ಯಕ್ಕೆ ಜಯ ದೊರೆತಿದೆ
ಇದೇ ಸಂದರ್ಭದಲ್ಲಿ ಹೇಳಿಕೆ ನೀಡಿದ, ರೆಡ್ಡಿ ಪರ ವಕೀಲ ಚಂದ್ರಶೇಖರ್, "ಸತ್ಯಕ್ಕೆ ಜಯ ದೊರೆತಿದೆ. ವಿನಾಕಾರಣ ಜನಾರ್ಧನ ರೆಡ್ಡಿ ಅವರನ್ನು ಅರೆಸ್ಟ್​ ಮಾಡಿ ಜೈಲಿಗೆ ಕಳುಹಿಸಿದ್ದರು. ಆದ್ರೆ ನಮಗೆ ನ್ಯಾಯಾಲಯದಲ್ಲಿ ಸಂಪೂರ್ಣ ವಿಶ್ವಾಸವಿತ್ತು. ಹಾಗಾಗಿ ಜಾಮೀನಿಗೆ ಅರ್ಜಿ ಸಿಲ್ಲಿಸಿ, ಗೆಲುವು ಸಾಧಿಸಿದ್ದೇವೆ. ಜನಾರ್ದನ ರೆಡ್ಡಿಗೂ- ಆ್ಯಂಬಿಡೆಂಟ್​​ಗೂ ಯಾವುದೇ ಸಂಬಂಧ ಇಲ್ಲ" ಎಂದು ಹೇಳಿದರು.


ಆ್ಯಂಬಿಡೆಂಟ್ ಕಂಪನಿ ಕಡೆಯಿಂದ 57 ಕೆ.ಜಿ. ಚಿನ್ನ ಪಡೆದ ಆರೋಪದಲ್ಲಿ ಜನಾರ್ಧನ ರೆಡ್ಡಿಯನ್ನು ಸಿಸಿಬಿ ಪೊಲೀಸರು ನವೆಂಬರ್ 11 ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಮತ್ತೊಂದೆಡೆ ರೆಡ್ಡಿ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಮಂಗಳವಾರ ವಿಚಾರಣೆ ಕೈಗೆತ್ತಿಕೊಂಡಿದ್ದ 1ನೇ ಎಸಿಎಂಎಂ ನ್ಯಾಯಾಲಯ ತೀರ್ಪನ್ನು ಬುಧವಾರಕ್ಕೆ ಕಾಯ್ದಿರಿಸಿತ್ತು. ಅದರಂತೆ ಇಂದು ತೀರ್ಪು ಪ್ರಕಟಿಸಿರುವ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.