ಬೆಂಗಳೂರು: ಆ್ಯಂಬಿಡೆಂಟ್ ಕಿಕ್​ ಬ್ಯಾಕ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಯವರನ್ನ ನವೆಂಬರ್ 24ರವರೆವಿಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


COMMERCIAL BREAK
SCROLL TO CONTINUE READING

ಆ್ಯಂಬಿಡೆಂಟ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಪರ ವಕೀಲರೊಂದಿಗೆ ನಿನ್ನೆಯಷ್ಟೇ ಸಿಸಿಬಿ ಕಚೇರಿಗೆ ಹಾಜರಾಗಿದ್ದ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ನಿನ್ನೆ ಸಂಜೆ ಸುಮಾರು 4 ಗಂಟೆಯಿಂದ ತಡರಾತ್ರಿವರೆಗೂ ವಿಚಾರಣೆ ಎದುರಿಸಿದ್ದರು. ಇಂದು ಬೆಳಿಗ್ಗೆಯೂ ವಿಚಾರಣೆ ಮುಂದುವರೆಸಿದ್ದ ಸಿಸಿಬಿ ಪೊಲೀಸರು ಸೂಕ್ತ ಪುರಾವೆ ಸಂಗ್ರಹಿಸಿ ಇಂದು ಮಧ್ಯಾಹ್ನ ಗಾಲಿ ಜನಾರ್ಧನ ರೆಡ್ಡಿಯವರನ್ನು ಬಂಧಿಸಿದ್ದರು. 


ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪೂರೈಸಿದ ಬಳಿಕ, ಕೋರಮಂಗಲದಲ್ಲಿರುವ ನ್ಯಾಯಾಧೀಶರ ಎದುರು ಜನಾರ್ಧನ  ರೆಡ್ಡಿಯನ್ನು ಹಾಜರುಪಡಿಸಿದರು. ಗಣಿ ಧಣಿಗೆ 14 ದಿನಗಳ ಕಾಲ ನೆವೆಂಬರ್‌ 24 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ 1 ನೇ ಎಸಿಎಂಎಂ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ನ್ಯಾಯಾಂಗ ಬಂಧನ ಹಿನ್ನಲೆಯಲ್ಲಿ ಜನಾರ್ಧನ ರೆಡ್ಡಿ ಅವರನ್ನು ವ್ಯಾಪಕ ಪೊಲೀಸ್‌ ಭದ್ರತೆಯೊಂದಿಗೆ ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಯಿತು.


ಜಾರಿ ನಿರ್ದೇಶನಾಲಯ ಪ್ರಕರಣದ ತನಿಖೆಯಲ್ಲಿ ಸಹಾಯ ಮಾಡುವುದಾಗಿ ಆ್ಯಂಬಿಡೆಂಟ್‌ ಕಂಪನಿಯ ಮಾಲೀಕ ಸೈಯದ್‌ ಅಹಮದ್‌ ಫ‌ರೀದ್‌ ಬಳಿ 57 ಕೆ.ಜಿ. ಚಿನ್ನದ ಗಟ್ಟಿ ಪಡೆದ ಆರೋಪ ಜನಾರ್ದನ ರೆಡ್ಡಿ ಅವರ ಮೇಲಿದೆ. ಭಾನುವಾರ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಎಸಿಪಿ ವೆಂಕಟೇಶ್ ಪ್ರಸನ್ನ ಅವರು ಶುಕ್ರವಾರ ರೆಡ್ಡಿಯವರಿಗೆ ನೋಟಿಸ್ ಜಾರಿ ಮಾಡಿದ್ದರು. ನೋಟಿಸ್ ನಲ್ಲಿ 48 ಗಂಟೆಗಳೊಳಗಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.