ಬೆಂಗಳೂರು: ಕಳೆದ ಎರಡು ದಿನಗಳಿಂದ ಸಿಸಿಬಿ ಪೋಲೀಸರು ಹುಡುಕುತ್ತಿದ್ದ ಆಂಬಿಡೆಂಟ್ ಕಂಪನಿ ವಂಚನೆ ಪ್ರಕರಣದ ಆರೋಪಿಯಾಗಿರುವ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ನೋಟಿಸ್ ಜಾರಿ  ಹಿನ್ನೆಲೆಯಲ್ಲಿ ಇಂದು ಸಿಸಿಬಿ ಪೊಲೀಸರ ವಿಚಾರಣೆಗೆ ಹಾಜರಾಗಿದ್ದಾರೆ.


COMMERCIAL BREAK
SCROLL TO CONTINUE READING

ಆ್ಯಂಬಿಡೆಂಟ್ ಡೀಲ್ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರಿಗೆ ಬೆಂಗಳೂರಿನ ಸಿಟಿ ಕ್ರೈಂ ಬ್ರಾಂಚ್ (ಸಿಸಿಬಿ) ಎಸಿಪಿ ವೆಂಕಟೇಶ್ ಪ್ರಸನ್ನ ಅವರು 48 ಗಂಟೆಗಳೊಳಗಾಗಿ ವಿಚಾರಣೆಗೆ ಹಾಜರಾಗುವಂತೆ ಶುಕ್ರವಾರ ನೋಟಿಸ್ ನೀಡಿದ್ದರು. ಈ ಬೆನ್ನಲ್ಲೇ ಇಂದು ಜನಾರ್ಧನ ರೆಡ್ಡಿ ತಮ್ಮ ವಕೀಲರೊಂದಿಗೆ ಕಾರಿನಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. ಆದರೆ ಸಿಸಿಬಿ ಕಚೇರಿಯಲ್ಲಿ ಯಾವ ಅಧಿಕಾರಿಗಳೂ ಇಲ್ಲದ ಕಾರಣ, ಕಚೇರಿಯ ಒಳಗೆ ಕುಳಿತು ಜನಾರ್ದನ ರೆಡ್ಡಿ, ಅಧಿಕಾರಿಗಳಿಗಾಗಿ ಕಾಯುತ್ತಿದ್ದಾರೆ. 


ವಿಚಾರಣೆಗೆ ತೆರಳುವ ಮುನ್ನ ಸಿಸಿಬಿ ಪೊಲೀಸರಿಗೆ ವೀಡಿಯೋವೊಂದನ್ನು ಕಳುಹಿಸಿದ್ದ ಜನಾರ್ಧನ ರೆಡ್ಡಿ, "ನಾನು ಬೆಂಗಳೂರಿನಲ್ಲೇ ಇದ್ದೆ. ಇಲ್ಲಿ ಬಿಟ್ಟು ಬೇರೆ ಕಡೆ ಹೋಗಿಲ್ಲ. ಹೋಗೋ ಅವಶ್ಯಕತೆಯೂ ಇಲ್ಲ. ಪೂರ್ವಾಗ್ರಹ ಪೀಡಿತರಾಗಿ, ದುರುದ್ದೇಶದಿಂದ ಪೊಲೀಸರು ಈ ರೀತಿ ಮಾಡುತ್ತಿದ್ದಾರೆ ಅಂತಾ ಅನುಮಾನ ಬಂದ ಕಾರಣ ನಾನು ಇಲ್ಲಿವರೆಗೂ ಸುಮ್ಮನಿದ್ದೆ. ನಮ್ಮ ಲಾಯರ್​ ಹೇಳಿದ ಪ್ರಕಾರ ನಾನು ನಡೆದುಕೊಂಡಿದ್ದೇನೆ. ನಾಳೆ ಭಾನುವಾರ ವಿಚಾರಣೆಗೆ ಬರುವಂತೆ ನಿನ್ನೆ ನೋಟಿಸ್​ ಕೊಟ್ಟಿದ್ದಾರೆ. ಆದ್ರೆ ನಾನು ಇವತ್ತೇ ಸಿಸಿಬಿ ಕಚೇರಿಗೆ ಹಾಜರಾಗುತ್ತಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ.  ರಾಜಕೀಯ ಷಡ್ಯಂತ್ರಕ್ಕೆ ಒಳಪಡದೇ, ಪ್ರಾಮಾಣಿಕವಾಗಿ ವಿಚಾರಣೆ ನಡೆಸುತ್ತಾರೆಂಬ ನಂಬಿಕೆ ನನಗೆ ಇದೆ" ಎಂದು ಸಂದೇಶ ನೀಡಿದ್ದರು.


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹೈಕೋರ್ಟ್‍ ನಲ್ಲಿಯೂ ಕೂಡ ಎರಡು ರಿಟ್ ಅರ್ಜಿಗಳನ್ನು ಜನಾರ್ಧನರೆಡ್ಡಿ ಪರ ವಕೀಲರು ಸಲ್ಲಿಸಿದ್ದಾರೆ. ಪ್ರಕರಣದ ರದ್ದು ಕೋರಿ ಒಂದು ಕ್ರಿಮಿನಲ್ ರಿಟ್ ಪಿಟಿಷನ್ ಹಾಗೂ ತನಿಖಾಧಿಕಾರಿಗಳ ಬದಲಾವಣೆ ಕೋರಿ ರಿಟ್ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ, ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ. ಹಾಗಾಗಿ ಪ್ರಕರಣವನ್ನು ರದ್ದು ಮಾಡಬೇಕು ಮತ್ತು ತನಿಖಾಧಿಕಾರಿಗಳು ಪೂರ್ವಾಗ್ರಹಪೀಡಿತರಾಗಿದ್ದು ಅವರನ್ನು ಬದಲಾವಣೆ ಮಾಡಬೇಕೆಂದು ಜನಾರ್ಧನ ರೆಡ್ಡಿ ಪರ ವಕೀಲರು ಮನವಿ ಮಾಡಿದ್ದಾರೆ.