ಜನಾಶೀರ್ವಾದ ಯಾತ್ರೆ: ನಾಡ ಅಧಿದೇವತೆ ಚಾಮುಂಡೇಶ್ವರಿ ದರ್ಶನ ಪಡೆದ ರಾಹುಲ್
ರಾಹುಲ್ ಗಾಂಧಿಯ ನಾಲ್ಕನೇ ಹಂತದ ಜನಾಶೀರ್ವಾದ ಯಾತ್ರೆ ಶನಿವಾರ ಮತ್ತು ಭಾನುವಾರ ಸಾಂಸ್ಕೃತಿಕ ನಗರಿ ಮೈಸೂರು ಭಾಗದಲ್ಲಿ ನಡೆಯಲಿದೆ.
ಮೈಸೂರು: ಜನಾಶೀರ್ವಾದ ಯಾತ್ರೆಯ ನಾಲ್ಕನೇ ಆವೃತ್ತಿ ಪ್ರಯುಕ್ತ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು(ಮಾರ್ಚ್ 24) ನಾಡ ಅಧಿದೇವತೆ ಚಾಮುಂಡೇಶ್ವರಿ ದರ್ಶನ ಪಡೆದರು.
ಜನಾಶೀರ್ವಾದ ಯಾತ್ರೆಯ ನಾಲ್ಕನೇ ಆವೃತ್ತಿಯಲ್ಲಿ ಪಾಲ್ಗೊಳ್ಳಲು ವಿಶೇಷ ವಿಮಾನದ ಮೂಲಕ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬರಮಾಡಿಕೊಂಡರು. ಬಳಿಕ ರಾಹುಲ್ ಗಾಂಧಿ ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿ ನಾಡ ಅಧಿದೇವತೆಗೆ ಪೂಜೆ ಸಲ್ಲಿಸಿದರು.
ನಂತರ ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಹುಲ್ ಗಾಂಧಿ, "ನಾವು ನೋಟು ಅಮಾನ್ಯೀಕರಣ ಮತ್ತು ಜಿಎಸ್ಟಿ ನಡೆಸಿದ ಅಳವಡಿಸಿಕೊಂಡಿರುವ ವಿಧಾನವನ್ನು ವಿರೋಧಿಸಿದ್ದೇವೆ. ಈ ಎರಡೂ ಉದ್ಯೋಗ ಸೃಷ್ಟಿಯಲ್ಲಿ ಹಾನಿಕಾರಕ ಪರಿಣಾಮವನ್ನು ಬೀರಿವೆ" ಎಂದು ತಿಳಿಸಿದರು.
"ಆರ್ಟಿಐ ಹೆಚ್ಚಿನ ಪಾರದರ್ಶಕತೆಗಾಗಿ ಅವಕಾಶ ನೀಡುತ್ತದೆ ಮತ್ತು ಸರ್ಕಾರವು ಏನು ಮಾಡುತ್ತಿದೆ ಎಂಬುದನ್ನು ಜನರಿಗೆ ತಿಳಿಸುವಂತೆ ನಾವು ಲೋಕಪಾಲ್ ಮತ್ತು ಆರ್ಟಿಐ ಜೊತೆ ಅಧಿಕಾರವನ್ನು ವಿಕೇಂದ್ರೀಕರಣ ಮಾಡಬೇಕಾಗಿದೆ ಆದರೆ ಮೋದಿ ಸರ್ಕಾರ ಲೋಕಪಾಲನ್ನು ನೇಮಕ ಮಾಡುತ್ತಿಲ್ಲ" ಎಂದು ರಾಹುಲ್ ಇದೇ ವೇಳೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.