ಹೊರೆ ಹೊತ್ತ ಮಹಿಳೆಯ ಕೈ ಹಿಡಿದ `ಗಡಿಯಾರ`
ಬೆಂಗಳೂರು: ರಾಷ್ಟ್ರೀಯ ಪಕ್ಷಗಳಿಗೆ ಒಂದಿಲ್ಲೊಂದು ಶಾಕ್ ಕೊಡುತ್ತಲೇ ರಾಜ್ಯ ವಿಧಾನ ಸಭಾ ಚುನಾವಣೆಗೆ ರಣಕಹಳೆ ಊದುತ್ತಿರುವ ಜೆಡಿಎಸ್, ರಾಜ್ಯದಲ್ಲಿ ಮಹಾಮೈತ್ರಿಯ ಮೂಲಕ ತನ್ನ ಗುರುತರವಾದ ಛಾಪನ್ನು ಮೂಡಿಸುತ್ತಿದೆ.
ಇತ್ತೀಚಿಗೆ ಮಾಯಾವತಿಯ ಬಿಎಸ್ಪಿ ಜೊತೆಗೆ ಮೈತ್ರಿ ಮಾಡಿಕೊಂಡ ಜೆಡಿಎಸ್, ಆ ಮೂಲಕ ಸಾಂಪ್ರಾದಾಯಿಕವಾಗಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಹಂಚಿಹೋಗುತ್ತಿದ್ದ ಮತಗಳಿಗೆ ಬ್ರೇಕ್ ಹಾಕಲು ಸಜ್ಜಾಗಿದೆ. ಅದೇ ರೀತಿಯಾಗಿ ಈಗ ಶರದ್ ಪವಾರ್ ರವರ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ಜೊತೆ ಮೈತ್ರಿ ಮಾಡಿಕೊಳ್ಳುವ ಮೂಲಕ ರಾಜ್ಯದಲ್ಲಿ ಮಹಾಮೈತ್ರಿಗೆ ಮುಂದಾಗಿದೆ.
ಇಂದು ಬೆಂಗಳೂರಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಎನ್ಸಿಪಿ ಪಕ್ಷದ ಅಧ್ಯಕ್ಷರಾದ ಶರದ್ ಪವಾರ್ ರವರನ್ನು ಭೇಟಿ ಮಾಡಿ ರಾಜ್ಯ ವಿಧಾನಸಭೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಕುರಿತಾಗಿ ಮಾತುಕತೆ ನಡೆಸಿದರು.ಇದಕ್ಕೆ ಒಪ್ಪಿಗೆ ಸೂಚಿರುವ ಪವಾರ್ ಕರ್ನಾಟಕದಲ್ಲಿ 5 ರಿಂದ 7 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಸಾದ್ಯತೆ ಇದೆ. ಅಲ್ಲದೆ ಒಂದು ವಾರಗಳ ಕಾಲ ಅವರು ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಇದೆ ಸಂದರ್ಭದಲ್ಲಿ ಸಭೆಯಲ್ಲಿ ಕೇರಳದ ಎಂಎಲ್ಎ ಹಾಗೂ ಹಿರಿಯ ನಾಯಕ ಪಿಜಿಆರ್ ಸಿಂಧ್ಯ ಉಪಸ್ಥಿತರಿದ್ದರು.