ಮಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ಆರಂಭವಾಗಿದ್ದು, ಕೆಲವೇ ದಿನಗಳಲ್ಲಿ ಸರ್ಕಾರ ಬೀಳಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅಭಿಪ್ರಾಯಪಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂ ಪಕ್ಷಗಳ ಶಾಸಕರು ಸಂಪುಟ ಸ್ಥಾನಕ್ಕಾಗಿ ಕಿತ್ತಾಟ ಆರಂಭಿಸಿದ್ದಾರೆ. ಒಳಗೊಳಗೇ ಭಿನ್ನಮತ ಹೊಗೆಯಾಡುತ್ತಿದೆ. ಹೀಗಾಗಿ ರಾಜ್ಯದಲ್ಲಿ ಆಡಳಿತ ಯಂತ್ರ ಹಿಡಿತದಲ್ಲಿಲ್ಲದ ಕಾರಣ ಅಧಿಕಾರಿಗಳು ಮನಬಂದಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕಿಡಿ ಕಾರಿದರು. 


ಲೋಕಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಮೈತ್ರಿ ಕುರಿತು ಮಾತನಾಡಿದ ಅವರು, ತೃತೀಯ ರಂಗ ಒಂದು ಹರಿದ ಬಟ್ಟೆ ಇದ್ದಂತೆ. ಒಂದು ಕಡೆಯಿಂದ ಹೊಲೆಯಲು ಆರಂಭಿಸಿದರೆ ಮತ್ತೊಂದು ಕಡೆಯಿಂದ ಮತ್ತಷ್ಟು ದೊಡ್ಡದಾಗಿ ಹರಿಯುತ್ತದೆ. ಈಗಾಗಲೇ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಅವರು ಕಾಂಗ್ರೆಸ್ ಜೊತೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ತೆಲುಗುದೇಶಂ ಟಿಎಸ್ಆರ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ತಮಿಳುನಾಡಿನಲ್ಲಿ ಎಐಎಡಿಎಂಕೆ-ಡಿಎಂಕೆ ಗಳಷ್ಟು ಬದ್ಧ ವೈರಿಗಳು ಈ ಜಗತ್ತಿನಲ್ಲಿಯೇ ಇಲ್ಲ ಎಂದು ಅವರು ಅಭಿಪ್ರಾಯಪಟ್ಟರು.