ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ರಚನೆ ನಂತರ ಇದೇ ಮೊದಲ ಬಾರಿಗೆ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಸಮನ್ವಯ ಸಮಿತಿ ಸಭೆ ಜೂನ್ 14ರಂದು ನಡೆಯಲಿದೆ. 


COMMERCIAL BREAK
SCROLL TO CONTINUE READING

ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ಸೇರಿದಂತೆ ಇತರ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ.


ನೂತನ ಸರ್ಕಾರದ ಸಂಪುಟ ರಚನೆ ಸಂಬಂಧ ಶಾಸಕರಲ್ಲಿ ಅಸಮಾಧಾನ ಭುಗಿಲೆದ್ದಿರುವ ಬೆನ್ನಲ್ಲೇ ಜುಲೈನಲ್ಲಿ ಸರ್ಕಾರ ಬಜೆಟ್ ಮಂಡಿಸಬೇಕಾದ ಹಿನ್ನೆಲೆಯಲ್ಲಿ ದಿಢೀರ್‌ ಸಮನ್ವಯ ಸಮಿತಿ ಸಭೆ ಕರೆಯಲಾಗಿದೆ ಎನ್ನಲಾಗುತ್ತಿದೆ. 


ಸದ್ಯ ಬಾದಾಮಿ ಕ್ಷೇತ್ರ ಪ್ರವಾಸದಲ್ಲಿರುವ ಶಾಸಕಾಂಗ ನಾಯಕ ಸಿದ್ದರಾಮಯ್ಯ ಅವರು ಇಂದು ಬೆಂಗಳೂರಿಗೆ ಹಿಂತಿರುಗಲಿದ್ದು, ಸಭೆ ಬಗ್ಗೆ ಮತ್ತಷ್ಟು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ಅಲ್ಲದೆ, ಸಭೆಯಲ್ಲಿ ಚುನಾವಣೆ ಸಂದರ್ಭದಲ್ಲಿ ಎರಡೂ ಪಕ್ಷಗಳೂ ಘೋಷಿಸಿದ್ದ ಪ್ರಣಾಳಿಕೆಯ ಮುಖ್ಯ ಅಂಶಗಳನ್ನು ಚರ್ಚಿಸಿ ಯಾವ ಯೋಜನೆಗಳನ್ನು ಜಾರಿಗೊಳಿಸಬೇಕು? ಯಾವ ಪಕ್ಷಕ್ಕೆ ಯಾವ ನಿಗಮ, ಯಾವ ಮಂಡಳಿ ನೀಡಬೇಕು ಎಂಬುದನ್ನು ನಿರ್ಧರಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.