ಬೆಂಗಳೂರು: ಇಂದು ನಡೆದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆಯಲ್ಲಿ ರೈತರ ಬೆಳೆ ಸಾಲ ಮನ್ನಾ ಮಾಡಲು ಒಪ್ಪಿಗೆ ನೀಡಲಾಗಿದ್ದು, ಪ್ರಮುಖ ಯೋಜನೆಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಜೆಡಿಎಸ್ ನಾಯಕ ಡ್ಯಾನಿಷ್ ಅಲಿ ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಭಾನುವಾರ ಮಧ್ಯಾಹ್ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕುಮಾರಕೃಪಾ ಅತಿಥಿ ಗೃಹದಲ್ಲಿ ನಡೆದ ಸಮನ್ವಯ ಸಮಿತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭೆಯಲ್ಲಿ ರೈತರ ಬೆಳೆ ಸಾಲ ಮನ್ನಾ ಮಾಡಲು ಸರ್ವಾನುಮತದಿಂದ ಒಪ್ಪಿಗೆ ನೀಡಲಾಗಿದೆ. ಮುಂದಿನ 5 ವರ್ಷಗಳಲ್ಲಿ 1 ಕೋಟಿ ಹೊಸ ಉದ್ಯೋಗ ಸೃಷ್ಟಿ, ನಿವೇಶನ ರಹಿತರಿಗೆ 20 ಲಕ್ಷ ಮನೆ ನಿರ್ಮಾಣ, ನೀರಾವರಿ ಯೋಜನೆಗಳಿಗಾಗಿ 1.25 ಲಕ್ಷ ಕೋಟಿ ಅನುದಾನ ಮೀಸಲಿಡಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.


ಮುಂದುವರೆದು ಮಾತನಾಡಿದ ಅವರು, ಈ ಹಿಂದೆ ಇದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಎಲ್ಲಾ ಜನಪ್ರಿಯ ಯೋಜನೆಗಳೊಂದಿಗೆ ಕೆಲವು ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಈ ಸಂಬಂಧ ಸದ್ಯದಲ್ಲಿಯೇ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮಂಡಿಸಲಿದ್ದಾರೆ. ಆದರೆ ಸಂಪುಟ ವಿಸ್ತರಣೆ ವಿಚಾರವನ್ನು ಸಭೆಯಲ್ಲಿ ಚರ್ಚಿಸಲಾಗಿಲ್ಲ ಎಂದು ಡ್ಯಾನಿಶ್ ಅಲಿ ಹೇಳಿದರು.


ಸಭೆಯಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕಾಂಗ್ರೆಸ್ ಕರ್ನಾಟಕ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಪಾಲ್ಗೊಂಡಿದ್ದರು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ನಡೆದ ಎರಡನೇ ಸಮನ್ವಯ ಸಮಿತಿ ಸಭೆ ಇದಾಗಿದೆ.