ಜೆಡಿಎಸ್ ಮುಖಂಡನ ಹತ್ಯೆಗೆ ಹಳೆಯ ದ್ವೇಷ ಕಾರಣವಾಯಿತೇ?
ಹಿಂದಿನಿಂದಲೂ ಗ್ರಾಮದಲ್ಲಿ ಹಳೆಯ ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವಿನ ವೈಷಮ್ಯವಿತ್ತು. ಈ ಹಿನ್ನೆಲೆಯಲ್ಲಿ ಪ್ರಕಾಶ್ ಅವರ ಕೊಲೆ ನಡೆದಿದೆ ಎನ್ನಲಾಗುತ್ತಿದೆ.
ಮದ್ದೂರು: ಸೋಮವಾರ ಸಂಜೆ ಪಟ್ಟಣದಲ್ಲಿ ನಡೆದ ಜೆಡಿಎಸ್ ಮುಖಂಡನ ಬರ್ಬರ ಹತ್ಯೆಗೆ ಹಳೆಯ ದ್ವೇಷವೇ ಕಾರಣ ಎಂಬ ಎನ್ನಲಾಗುತ್ತಿದೆ.
ಎರಡು ವರ್ಷಗಳ ಹಿಂದೆ ಅಂದರೆ, 2016ರ ಡಿ. 25ರಂದು ಮದ್ದೂರು ತಾಲೂಕು ತೊಪ್ಪನಹಳ್ಳಿ ಗ್ರಾಮದಲ್ಲಿ ಎರಡು ಗುಂಪುಗಳ ನಡುವಿನ ಘರ್ಷಣೆಯಲ್ಲಿ ಇಬ್ಬರು ಜೆಡಿಎಸ್ ಕಾರ್ಯಕರ್ತರ ಕೊಲೆಯಾಗಿತ್ತು. ಗ್ರಾಮದ ನಿವಾಸಿಗಳಾದ ನಂದೀಶ್(25), ಮುತ್ತುರಾಜು ಅಲಿಯಾಸ್ ಕೋಟಿ(48) ಮೃತಪಟ್ಟು, ಚನ್ನೇಗೌಡ, ಮುತ್ತ ಸೇರಿದಂತೆ ಐವರು ಗಾಯಗೊಂಡಿದ್ದರು.
ಈ ಘಟನೆಗೂ ಸೋಮವಾರ ನಡೆದ ಪ್ರಕಾಶ್ ಅವರ ಕೊಲೆಗೂ ಥಳಕು ಹಾಕಲಾಗುತ್ತಿದೆ. ಜೋಡಿ ಕೊಲೆ ಪ್ರಕರಣದ ಹಿನ್ನೆಲೆಯಲ್ಲೇ ಪ್ರಕಾಶ್ ಅವರ ಕೊಲೆ ನಡೆದಿದೆ ಎನ್ನಲಾಗುತ್ತಿದೆ. ಎರಡು ವರ್ಷಗಳ ಹಿಂದೆ ನಡೆದ ಕೊಲೆಯ ಪ್ರಮುಖ ಆರೋಪಿಗಳಾದ ಮುತ್ತುರಾಜು, ಪ್ರಸನ್ನ ಎಂಬುವರ ವಿರುದ್ಧ ಸದ್ಯ ಹತ್ಯೆಯಾಗಿರುವ ಪ್ರಕಾಶ್ ದೂರು ನೀಡಿದ್ದರು. ಈ ಆರೋಪಿಗಳಿಗೆ ಬೇಲ್ ನೀಡಲು ಹೈಕೋರ್ಟ್ ನಿರಾಕರಿಸಿತ್ತು. ಇವರಿಗೆ ಬೇಲ್ ಸಿಗದಿರಲು ಪ್ರಕಾಶ್ರವರೇ ಪ್ರಮುಖ ಕಾರಣವಾಗಿದ್ದು, ಅದಕ್ಕಾಗಿಯೇ ಅವರ ಹತ್ಯೆ ನಡೆಯಿತೇ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಮದ್ದೂರಿನಲ್ಲಿ ಜೆಡಿಎಸ್ ಮುಖಂಡನ ಬರ್ಬರ ಹತ್ಯೆ; ಪ್ರತಿಭಟನೆ
ಹಿಂದಿನಿಂದಲೂ ಗ್ರಾಮದಲ್ಲಿ ಹಳೆಯ ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವಿನ ವೈಷಮ್ಯವಿತ್ತು. ಈ ಸಂಬಂಧ ನಡೆದ ಗಲಾಟೆಯೊಂದಕ್ಕೆ ಸಂಬಂಧಿಸಿದಂತೆ ಪ್ರಕರಣವೊಂದು ಪೊಲೀಸ್ ಠಾಣೆ ಮಟ್ಟಿಲೇರಿತ್ತು. ಇದೀಗ ಪರಿಸ್ಥಿತಿ ತಿಳಿಯಾಗುತ್ತಿದ್ದಂತೆ ಪ್ರಕಾಶ್ ಅವರ ಕೊಲೆ ನಡೆದಿದೆ.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಲರಾಮೇಗೌಡ ನೇತೃತ್ವದಲ್ಲಿ ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಿ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ಮದ್ದೂರು ಆಸ್ಪತ್ರೆ ಆವರಣದಲ್ಲೂ ಮಳವಳ್ಳಿ ಉಪವಿಭಾಗದ ಮಳವಳ್ಳಿ ಡಿವೈಎಸ್‌ಪಿ ಶೈಲೇಂದ್ರ, ಮಂಡ್ಯ ಡಿವೈಎಸ್‌ಪಿ ಗಂಗಾಧರಸ್ವಾಮಿ, ಮದ್ದೂರು ಸಿಪಿಐ ಮಹೇಶ್ ಸೇರಿದಂತೆ ವಿವಿಧ ಠಾಣೆಗಳ ಪಿಎಸ್‌ಐಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಇನ್ನು, ಮದ್ದೂರು ತಾಲೂಕಿನ ತೊಪ್ಪನಹಳ್ಳಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಪ್ರತಿಯೊಂದು ಮನೆಯ ಮುಂದೆಯೂ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಪರಿಸ್ಥಿತಿ ಕೈಮೀರದಂತೆ ಕಟ್ಟೆಚ್ಚರ ವಹಿಸಲಾಗಿದ್ದು, ಗ್ರಾಮದಲ್ಲಿ ಪೊಲೀಸ್ ಗಸ್ತನ್ನು ನಿಯೋಜನೆ ಮಾಡಲಾಗಿದೆ.