ಮದ್ದೂರು: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಹಾಡಹಗಲೇ ಜೆಡಿಎಸ್ ಮುಖಂಡನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಮದ್ದೂರು ಪಟ್ಟಣದಲ್ಲಿ ಸೋಮವಾರ ನಡೆದಿದೆ. 


COMMERCIAL BREAK
SCROLL TO CONTINUE READING

ಈ ಘಟನೆಯಿಂದಾಗಿ ಇಡೀ ಪಟ್ಟಣದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಹತ್ಯೆಯನ್ನು ಖಂಡಿಸಿ ಹಲವು ಜೆಡಿಎಸ್ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಇದರಿಂದಾಗಿ ಪಟ್ಟಣದಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ.


ಮದ್ದೂರು ತಾಲೂಕು ತೊಪ್ಪನಹಳ್ಳಿ ನಿವಾಸಿ, ಜಿ.ಪಂ.ಮಾಜಿ ಅಧ್ಯಕ್ಷೆ ಲಲಿತಾ ಅವರ ಪತಿ ಪ್ರಕಾಶ್‌(48) ಅವರೇ ಹತ್ಯೆಯಾದ ವ್ಯಕ್ತಿ. ಕಳೆದ ಎರಡು ವರ್ಷಗಳ ಹಿಂದೆ ತೊಪ್ಪನಹಳ್ಳಿ ಸಂಭವಿಸಿದ್ದ ಜೋಡಿ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಪ್ರಕಾಶ್‌ ಅವರ ಕೊಲೆ ನಡೆದಿರಬಹುದು ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ.


ಸೋಮವಾರ ಸಂಜೆ ಸುಮಾರು 4 ಗಂಟೆ ಸಮಯದಲ್ಲಿ ಮದ್ದೂರಿನ ಟಿಬಿ ಸರ್ಕಲ್ ಬಳಿ ಏಳನೀರು ಮಾರುಕಟ್ಟೆಗೆ ತೆರಳುತ್ತಿದ್ದ ಪ್ರಕಾಶ್ ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ. ಹಳೆ ವೈಷಮ್ಯವೇ ಈ ಹತ್ಯೆಗೆ ಕಾರಣ ಎನ್ನಲಾಗುತ್ತಿದೆ. 


ರಾಜಕೀಯ ಮುಂದಾಳತ್ವದ ಜತೆಗೆ ಎಪಿಎಂಸಿ ಎಳನೀರು ಮಾರುಕಟ್ಟೆಯಲ್ಲಿ ಸರಕು ಸಾಗಣೆ ವಾಹನಗಳ ಪೂರೈಕೆ ಹಾಗೂ ಎಳನೀರು ವಹಿವಾಟನ್ನು ಹೊಂದಿದ್ದ ಪ್ರಕಾಶ್‌, ನಿತ್ಯ ಎಪಿಎಂಸಿ ಎಳನೀರು ಮಾರುಕಟ್ಟೆಗೆ ಬಂದು ಹೋಗುತ್ತಿದ್ದರು. ಹೀಗಾಗಿ ಪ್ರಕಾಶ್‌ ಅವರ ಚಲನವಲನಗಳನ್ನು ಗಮನಿಸಿಯೇ ಮಾರುಕಟ್ಟೆಗೆ ಬರುವ ಸಂದರ್ಭದಲ್ಲಿ ಯೋಜನೆ ರೂಪಿಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.