ಶಿವಮೊಗ್ಗ: ಜೆಡಿಎಸ್ ಶಾಸಕ ಮಧುಬಂಗಾರಪ್ಪ ಶಾಶ್ವತ ಏತನೀರಾವರಿಗೆ ಆಗ್ರಹಿಸಿ 'ಅನ್ನದಾತನ ಕಣ್ಣೀರು' ಹೆಸರಲ್ಲಿ ಪ್ರಾರಂಭಿಸಿದ್ದ ನಾಲ್ಕು ದಿನಗಳ ಪಾದಯಾತ್ರೆ ಬುಧವಾರ ಸಂಜೆ ಶಿವಮೊಗ್ಗದಲ್ಲಿ ಮುಕ್ತಾಯಗೊಂಡಿದೆ. 


COMMERCIAL BREAK
SCROLL TO CONTINUE READING

ಶಾಶ್ವತ ಏತನೀರಾವರಿಗೆ ಆಗ್ರಹಿಸಿ ಮಧುಬಂಗಾರಪ್ಪ ಕಳೆದ ಭಾನುವಾರ ಸುರಭ ತಾಲೂಕಿನಿಂದ ಪ್ರಾರಂಭಿಸಿದ್ದ 118 ಕಿಲೋಮೀಟರ್ ದೂರದ ಯಾತ್ರೆಗೆ ಬುಧವಾರ ಸಂಜೆ ಶಿವಮೊಗ್ಗದಲ್ಲಿ ತೆರೆಬಿದ್ದಿದೆ.


ಪಾದಯಾತ್ರೆ ಶಿವಮೊಗ್ಗ ತಲುಪಿದ ಬಳಿಕ ಎನ್ಇಎಸ್ ಮೈದಾನದಲ್ಲಿ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಸಮಾವೇಶದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು. ಈ ಬಹಿರಂಗ ಸಮಾವೇಶದಲ್ಲಿ ಜೆಡಿಎಸ್ ನಾಯಕರು ಎದುರಾಳಿಗೆ ಟಾಂಗ್ ನೀಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಮಧುಬಂಗಾರಪ್ಪ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಏತನೀರಾವರಿ ಯೋಜನೆ ನೆನೆಗುದಿಗೆ ಬಿದ್ದಿದೆ. ನಾವು ಅಧಿಕಾರಕ್ಕೆ ಬಂದರೆ ಈ ಯೋಜನೆಗಳನ್ನು ಜಾರಿಗೊಳಿಸುತ್ತೇವೆ ಎಂದು ಭರವಸೆ ನೀಡಿದರು. ಜೊತೆಗೆ ಅವರು ಕಾಂಗ್ರೇಸ್ ಸೇರುತ್ತಾರೆ ಎಂಬುದು ಊಹಾಪೋಹವಷ್ಟೇ ಎಂದು ಸ್ಪಷ್ಟಪಡಿಸಿದರು.


ನಂತರ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಳೆದ ಹತ್ತು ವರ್ಷಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಆಡಳಿತ ಬಗ್ಗೆ ಇಂತಹ ಕೆಟ್ಟ ಆಡಳಿತ ರಾಜ್ಯದಲ್ಲಿ ನಡೆಯುತ್ತಿದೆ ಎಂದು ದೇಶಾದ್ಯಂತ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು. ಅಲ್ಲದೆ, ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಇಬ್ಬರ ನಡುವಿನ ಕೆಸರೆರಚಾಟದ ಬಗ್ಗೆ ಮಾತನಾಡಿದ ಅವರು ಇಬ್ಬರೂ ನಾಯಕರಿಗೆ ರಾಜ್ಯದ ಜನರ ನೋವಿನ ಅರಿವಿಲ್ಲ ಎಂದು ಹರಿಹೈದಿದ್ದಾರೆ.


ಶಾಶ್ವತ ನೀರಾವರಿ ಯೋಜನೆ, ವಿಶ್ವೇಶ್ವರಯ್ಯ ಕಬ್ಬಿನ ಹಾಗೂ ಎಂಪಿಎಂ ಕೈಗಾರಿಕೆ ಅವನತಿ ಇಂತಹ ವಿಚಾರವನ್ನು ಇಟ್ಟುಕೊಂಡು ಜೆಡಿಎಸ್ ಮಾಡಿದ ಪಾದಯಾತ್ರೆ ಯಶಸ್ವೀಯಾಗಿದೆ. ಮುಂದಿನ ಚುನಾವಣೆಯಲ್ಲಿ ಸ್ವಯಂ ಶಕ್ತಿಯ ಮೇಲೆ ಅಧಿಕಾರಕ್ಕೆ ಬರಬೇಕೆಂದು ಬಿಜೆಪಿ-ಕಾಂಗ್ರೇಸ್ ಜೊತೆಗೆ ಜೆಡಿಎಸ್ ಕೂಡ ಯಾತ್ರೆ, ರ್ಯಾಲಿಗಳನ್ನು ನಡೆಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ತನ್ನ ಪ್ರಯತ್ನ ಮಾಡುತ್ತಿದೆ. ಇವರ ಈ ಪ್ರಯತ್ನಕ್ಕೆ ಜನರ ಆಶೀರ್ವಾದ ದೊರೆಯುವುದೇ ಎಂಬುದನ್ನು ಕಾದುನೋಡಬೇಕಿದೆ.