ತಾಜ್ ವೆಸ್ಟ್ಎಂಡ್ನಿಂದ ಗಾಲ್ಫ್ ಶೈರ್ ರೆಸಾರ್ಟ್ನತ್ತ ಜೆಡಿಎಸ್ ಶಾಸಕರು!
ಇಂದು ರಾತ್ರಿ ಗಾಲ್ಫ್ ಶೈರ್ ರೆಸಾರ್ಟ್ ನಲ್ಲಿಯೇ ವಾಸ್ತವ್ಯ ಹೂಡಲಿರುವ ಶಾಸಕರು ಮುಂದಿನ ನಡೆಯ ಬಗ್ಗೆ ಸಿಎಂ ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಬೆಂಗಳೂರು: ಇಲ್ಲಿನ ತಾಜ್ ವೆಸ್ಟ್ಎಂಡ್ ಹೋಟೆಲಿನಲ್ಲಿ ಬೀಡುಬಿಟ್ಟಿದ್ದ 25 ಜೆಡಿಎಸ್ ಶಾಸಕರು ಇದೀಗ ನಂದಿ ಬೆಟ್ಟ ರಸ್ತೆಯಲ್ಲಿರುವ ಗಾಲ್ಫ್ ಶೈರ್ ರೆಸಾರ್ಟ್ ಗೆ ಹೊರಟಿದ್ದಾರೆ ಎಂದು ವರದಿಯಾಗಿದೆ.
ಇಂದು ರಾತ್ರಿ ಗಾಲ್ಫ್ ಶೈರ್ ರೆಸಾರ್ಟ್ ನಲ್ಲಿಯೇ ವಾಸ್ತವ್ಯ ಹೂಡಲಿರುವ ಶಾಸಕರು ಮುಂದಿನ ನಡೆಯ ಬಗ್ಗೆ ಸಿಎಂ ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕರ ಸಭೆ ನಡೆಯುತ್ತಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್, ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಕುಮಾರಕೃಪ ಅತಿಥಿ ಗೃಹದಲ್ಲಿ ಸಭೆ ನಡೆಸುತ್ತಿದ್ದು, ಸರ್ಕಾರದ ಮುಂದಿನ ನಡೆ ಏನು, ಯಾವ ನಿರ್ಧಾರ ಕೈಗೊಂಡರೆ ಒಳ್ಳೆಯದು ಎಂಬುದರ ಬಗ್ಗೆ ಕಾನೂನು ಸಲಹೆ ಪಡೆಯಲಿದ್ದಾರೆ.
ಇದಕ್ಕೂ ಮುನ್ನ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು, ಯಾವುದೇ ಸಮಸ್ಯೆಯಿಲ್ಲ, ಯೋಚಿಸಬೇಡಿ" ಎಂದು ಹೇಳಿದ್ದಾರೆ.
ಮತ್ತೊಂದೆಡೆ ಮುಂಬೈ ಹೋಟೆಲೊಂದರಲ್ಲಿ ತಂಗಿದ್ದ ಕಾಂಗ್ರೆಸ್-ಜೆಡಿಎಸ್ ಅತೃಪ್ತ ಶಾಸಕರು ಗೋವಾಗೆ ಶಿಫ್ಟ್ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.