ಮಂಡ್ಯ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆ ಗರಿಗೆದರಿದೆ.  ಕ್ಷೇತ್ರಕ್ಕಾಗಿ ಕಾಂಗ್ರೆಸ್ ಒಂದೆಡೆ ಕಸರತ್ತು ನಡೆಸುತ್ತಿದ್ರೆ, ಮತ್ತೊಂದೆಡೆ ಜೆಡಿಎಸ್ ಮುಖಂಡರು ಅಭ್ಯರ್ಥಿಯನ್ನು ಘೋಷಣೆ ಮಾಡಿಕೊಳ್ಳುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಸಿದ್ದತೆ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಿಖಿಲ್​ ವಿರುದ್ಧ ಗೋ ಬ್ಯಾಕ್​ ಆಂದೋಲನ ಕೂಡ ಆರಂಭಗೊಂಡಿದೆ. ಈಗ ನಿಖಿಲ್​ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ನಿಖಿಲ್​ ಮಂಡ್ಯದಿಂದ ಸ್ಪರ್ಧಿಸುತ್ತಿರುವುದಕ್ಕೆ ಜೆಡಿಎಸ್​ ಕಾರ್ಯಕರ್ತರಿಂದಲೇ ವಿರೋಧ ವ್ಯಕ್ತವಾಗುತ್ತಿದೆ.


ಮದ್ದೂರು ತಾಲೂಕು ಹೊಟ್ಟೇಗೌಡನ ದೊಡ್ಡಿ ಗ್ರಾಮದ ಜೆಡಿಎಸ್ ಕಾರ್ಯಕರ್ತ ರಘು ಎಂಬುವವರು 5 ನಿಮಿಷಗಳ ವಿಡಿಯೋ ಮಾಡಿ ಫೇಸ್ ಬುಕ್​ಗೆ ಹಾಕಿದ್ದಾರೆ. ಇದರಲ್ಲಿ ಅವರು ಕುಮಾರಸ್ವಾಮಿ ಅವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದು, ಕುಮಾರಸ್ವಾಮಿ ಅವರು ಅಂಬರೀಷ್​ ಕುರಿತು ಮಾತನಾಡಿರುವುವ ಹೇಳಿಕೆ ವಿರುದ್ಧ ಹಾಗೂ ಪುತ್ರ ವ್ಯಾಮೋಹದ ಬಗೆಗೆ ರಘು ಆಕ್ರೋಶ ಹೊರಹಾಕಿದ್ದಾರೆ. 


ನಮಸ್ಕಾರ ಕುಮಾರಣ್ಣರವರಿಗೆ, “ಮಂಡ್ಯಕ್ಕೆ ಅಂಬರೀಶಣ್ಣ ಅವರ ಮೃತದೇಹವನ್ನು ನಾನೇ ತಂದಿದ್ದು ಎಂದು ನೀವು ಹೇಳಿದಿರಿ. ಆದರೆ ನೀವು ಮರೆತಂತೆ ಕಾಣುತ್ತದೆ. ಅಂದು ರಾತ್ರಿ ನೀವು ಶವ ತರುವುದಿಲ್ಲ. ಬೆಂಗಳೂರಿಗೆ ಬಸ್ ಕಳುಹಿಸುತ್ತೇನೆ ಎಂದು ಹೇಳಿದ್ರಿ. ನಾವು ಗಲಾಟೆ ಮಾಡದ್ವಿ. ಕೇಂದ್ರ ಸರ್ಕಾರ ಹೆಲಿಕಾಪ್ಟರ್ ನೀಡಿತ್ತು. ನಾವು ಗಲಾಟೆ ಮಾಡಿದ್ದರಿಂದ ನೀವು ಅವರ ಮೃತದೇಹವನ್ನು ಮಂಡ್ಯಕ್ಕೆ ತಂದಿರಿ,” ಎಂದು ರಘು ಹೇಳಿದ್ದಾರೆ.


ಇದೇ ವೇಳೆ ಸುಮಲತಾ ಮನೆಗೆ ಹೋದರೆ ನೀರೂ ಕೊಡುವುದಿಲ್ಲ ಎಂಬ ಕೆಲವರ ಹೇಳಿಕೆಗೆ ತಿರುಗೇಟು ನೀಡಿರುವ ರಘು, “ನಮ್ಮಣ್ಣ ದಾನಶೂರ ವೀರ ಕರ್ಣ. ಅವರ ಮನೆ ಏನು ಮನೆತನ ಏನು ಅಂತ ನಮ್ಗಿಂತ ಚೆನ್ನಾಗಿ ನಿಮಗೇ ಗೊತ್ತು. ಮಂಡ್ಯದ ಜನ ದಡ್ಡರಲ್ಲ. ನೀವು ರಾಜಕೀಯದಲ್ಲಿ ಹಿರಿಯರಿದ್ದೀರಿ. ಸುಮ ಅಮ್ಮನ ಬಗೆಗೆ ಮಾತನಾಡುವಾಗ ನೋಡ್ಕೊಂಡು ಮಾತಾಡಿ” ಎಂದು ಎಚ್ಚರಿಸಿದ್ದಾರೆ.


ಸುಮಲತಾ ಸ್ಪರ್ಧೆ ಖಚಿತ:
ಮುಂಬರುವ ಲೋಕಸಭಾ ಚುನಾವಣೆಗೆ ಮಂಡ್ಯದಿಂದ ಸುಮಲತಾ ಅಂಬರೀಶ್​ ಸ್ಪರ್ಧಿಸೋದು ಖಚಿತ ಎಂದು ಹೇಳಲಾಗುತ್ತಿದೆ. ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಡಲು ಈಗಾಗಲೇ​ ಕಾಂಗ್ರೆಸ್ ನಿರ್ಧರಿಸಿದೆ ಎನ್ನಲಾಗುತ್ತಿದೆ.​ ಇದರಿಂದ ಸುಮಲತಾಗೆ ಕಾಂಗ್ರೆಸ್​ ಟಿಕೆಟ್ ತಪ್ಪುವ ಸಾಧ್ಯತೆ ಇದೆ. ಹೀಗಾಗಿ ಸುಮಲತಾ ಪಕ್ಷೇತರರಾಗಿಯೇ ಸ್ಫರ್ಧಿಸಲು ತೀರ್ಮಾನಿಸಿದ್ದಾರೆ ಎನ್ನಲಾಗುತ್ತಿದೆ.