ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ದೋಸ್ತಿಗಳು ಕಡೇ ಕ್ಷಣದವರೆಗೂ ತಮ್ಮ ಕಸರತ್ತು ಮುಂದುವರೆಸಿದ್ದು, ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಡುವುದಾಗಿ ಜೆಡಿಎಸ್‌ ದಾಳವುರುಳಿಸಿದೆ. ಆದರೆ, ಸಿದ್ದರಾಮಯ್ಯ ಇದನ್ನು ನಿರಾಕರಿಸಿದ್ದು, ಮೈತ್ರಿ ಸರ್ಕಾರ ಉಳಿಸುವುದೊಂದೇ ನಮ್ಮ ಗುರಿ. ಸದ್ಯಕ್ಕೆ ಸಿಎಂ ಬದಲಾವಣೆ ಬೇಡ ಎಂದಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಜೆಡಿಎಸ್​​ ಶಾಸಕ ಶಿವಲಿಂಗೇಗೌಡ ಬಳಿ ಸಿದ್ದರಾಮಯ್ಯ ಸಿಎಂ ಹುದ್ದೆ ನಿರಾಕರಿಸಿದ್ದರು. ಇದರ ಬೆನ್ನಲ್ಲೇ ಸಚಿವ ಸಿ.ಎಸ್​​ ಪುಟ್ಟರಾಜು, ಶಿವಲಿಂಗೇಗೌಡ, ಭೋಜೇಗೌಡ ಮತ್ತಿತರರು ಭಾನುವಾರ ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ್ದು, ಸರ್ಕಾರ ಉಳಿಸಲು ನಿಮ್ಮಿಂದಲೇ ಸಾಧ್ಯ. ಹಾಗಾಗಿ ಮುಖ್ಯಮಂತ್ರಿ ಆಗಬೇಕೆಂದು ಒತ್ತಡ ಹಾಕಿದ್ದಾರೆ ಎಂದು ತಿಳಿದುಬಂದಿದೆ.


ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿಗೆ ತೆರೆ ಎಳೆಯಲು ಕಾಂಗ್ರೆಸ್ ಪಕ್ಷಕ್ಕೆ ಮುಖ್ಯಮಂತ್ರಿ ಹುದ್ದೆ ತ್ಯಾಗಕ್ಕೆ ಸಿದ್ಧ. ಯಾರು ಬೇಕಾದರೂ ಮುಖ್ಯಮಂತ್ರಿಯಾಗಲಿ ನಮ್ಮದೇನು ಅಭ್ಯಂತರವಿಲ್ಲ ಎಂದು ಜೆಡಿಎಸ್ ನಾಯಕರು ಹೇಳಿರುವುದಾಗಿ ಡಿ.ಕೆ. ಶಿವಕುಮಾರ್ ಹೇಳಿದ್ದು ಸಿದ್ದರಾಮಯ್ಯ ಮತ್ತೆ ಸಿಎಂ ಪಟ್ಟ ಸಿಗಲಿದೆ ಎಂಬ ಹೇಳಿಕೆಗೆ ಪುಷ್ಟಿ ನೀಡಿದಂತಾಗಿದೆ.


ಹಲವು ಕಾಂಗ್ರೆಸ್ ಶಾಸಕರು ಈಗಲೂ ಸಿದ್ದರಾಮಯ್ಯನವರೇ ನಮ್ಮ ಮುಖ್ಯಮಂತ್ರಿಗಳು ಎಂದು ಹೇಳಿ ಜೆಡಿಎಸ್ ಕೆಂಗಣ್ಣಿಗೆ ಗುರಿಯಾಗಿದ್ದರು. ಅದಲ್ಲದೆ ಆಗಾಗ್ಗೆ ಸಿದ್ದರಾಮಯ್ಯ ಸಿಎಂ ಎಂಬ ಕೆಲ ಶಾಸಕರ ಹೇಳಿಕೆ ದಳಪತಿಗಳನ್ನು ಕೋಪಗೊಳ್ಳುವಂತೆ ಮಾಡಿತ್ತು. ಈ ಕಾರಣದಿಂದಲೇ ಏನೋ ಅತೃಪ್ತ ಶಾಸಕರ ರಾಜೀನಾಮೆ ಬಳಿಕ ಅವರ ಹಿಂದೆ ಸಿದ್ದರಾಮಯ್ಯ ಕೈವಾಡವಿದೆ ಎಂಬ ಆರೋಪಗಳು ಕೇಳಿಬಂದಿದ್ದವು.


ಇದೀಗ ಸಿದ್ದರಾಮಯ್ಯ ಅವರಿಗೆ ಸಿಎಂ ಪಟ್ಟ ಕಟ್ಟಿದರೆ ಅತೃಪ್ತ ಶಾಸಕರು ವಾಪಸ್ ಬರಬಹುದೇನೋ ಎಂಬ ಲೆಕ್ಕಾಚಾರ ಹಾಕಿರುವ ಜೆಡಿಎಸ್, ಸಿದ್ದರಾಮಯ್ಯ ಅವರಿಗೆ ಸಿಎಂ ಪಟ್ಟ ಬಿಟ್ಟುಕೊಡಲು ಸಿದ್ದವಾಗಿದೆ.


ಮೊದಲು ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳೋಣ. ಸದ್ಯಕ್ಕೆ ಸಿಎಂ ಬದಲಾವಣೆ ಬೇಡ ಎಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿಎಂ ಆಫರ್ ಅನ್ನು ನಾಜೂಕಾಗಿ ನಿರಾಕರಿಸಿದ್ದಾರೆ.