ಮೈಸೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ತೀವ್ರ ಕುತೂಹಲ ಮೂಡಿಸಿರುವ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರವನ್ನು ಪ್ರತಿಷ್ಠೆಯ ಕಣವಾಗಿ ತೆಗೆದುಕೊಂಡಿರುವ ಜೆಡಿಎಸ್ ಈ ಭಾಗದ 25ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. 


COMMERCIAL BREAK
SCROLL TO CONTINUE READING

ಇಲ್ಲಿನ ಖಾಸಗಿ ಹೋಟೆಲೊಂದರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಮತ್ತು ಶಾಸಕ ಜಿ.ಟಿ.ದೇವೇಗೌಡ ಅವರು, ಚಾಮುಂಡೇಶ್ವರಿ ಕ್ಷೇತ್ರದ ಪ್ರಮುಖ ಪ್ರಭಾವಿಗಳಾದ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾದ ದಿ. ಕೆಂಪೀರೇಗೌಡ ಅವರ ಪುತ್ರ ಉಮಾಶಂಕರ್, ಎಂ.ಹೆಚ್.ಮಹದೇವಸ್ವಾಮಿ, ಮಾರ್ಬಳಿ ಗ್ರಾಮದ ಕಾಳಿಂಗ ನಾಯಕರು, ಗುರುಸ್ವಾಮಿ, ಸಿ.ಕೃಷ್ಣಪ್ಪ, ಸಿದ್ದೇಗೌಡ, ಏಕಂಬರೇಶ್, ಜಿ.ಎಂ.ಅಂದಾನಿ, ಭೈರಪ್ಪ ಗೋವಿಂದಪುರ, ನಾಡನಹಳ್ಳಿ ಚಂದ್ರಶೇಖರ್, ರಮೇಶ್, ಯೋಗೇಶ್ ಸೇರಿದಂತೆ 25ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರನ್ನು ಬುಧವಾರ ಪಕ್ಷಕ್ಕೆ ಸೆಳೆಯುವಲ್ಲಿ  ಶಾಸಕ ಜಿ.ಟಿ.ದೇವೇಗೌಡ ಯಶಸ್ವಿಯಾಗಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.


"ವರುಣಾ ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಪ್ಪ - ಮಗ ಮನೆಗೆ ಹೋಗುತ್ತಾರೆ. ಎಂಬ ದುರಹಂಕಾರದ ಮಾತುಗಳನ್ನು ನಾನು ಆಡುವುದಿಲ್ಲ. ಹಾಸನಕ್ಕೆ ಹೋಗಿ ದೇವೇಗೌಡರ ಮಕ್ಕಳನ್ನು ಗೆಲ್ಲಿಸಬೇಡಿ ಅಂತಾ ಹೇಳ್ತಾರೆ. ಅಷ್ಟೇ ಏಕೆ, ನಿನ್ನೆ ಕ್ಷೇತ್ರದ ಕೆಲ ಒಕ್ಕಲಿಗ ನಾಯಕರ ಮೂಲಕ ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ಮಾಡಿಸಿ, ಕಾಂಗ್ರೆಸ್'ಗೆ ಬೆಂಬಲ ನೀಡುತ್ತಿರುವುದಾಗಿ ಹೇಳಿಸಿದ್ದಾರೆ. ಹೀಗೆ ಮಾಡುವ ಮೂಲಕ ಸಿದ್ದರಾಮಯ್ಯ ತಮ್ಮ ಬಲಹೀನತೆಯನ್ನು ತೋರಿಸಿಕೊಳ್ಳುತ್ತಿದ್ದಾರೆ" ಎಂದು ಹೆಚ್.ಡಿ.ಕುಮಾರಸ್ವಾಮಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.


ಕುರ್ಚಿಯಿಂದ ಬೀಳುವುದು ಶುಭ ಶಕುನವೇ?
ಮುಂದುವರೆದು ಮಾತಾನಾಡಿದ ಅವರು, "ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಪ್ರಚಾರಕ್ಕೆ ಹೋದಕಡೆಯೆಲ್ಲಾ ಕುರ್ಚಿಯಿಂದ ಬಿದ್ದು ಏಟು ಮಾಡಿಕೊಳ್ಳುತ್ತಿದ್ದಾರೆ, ಇದರಿಂದ ಅವರಿಗೆ ಚುನಾವಣೆ ಭಯ ಉಂಟಾಗಿದೆ. ಹಾಗಾಗಿ ದೇವೇಗೌಡರ ವಿರುದ್ಧ, ಕುಮಾರಸ್ವಾಮಿ ವಿರುದ್ಧ ಬೇಕಾದ್ದು ಮಾತನಾಡುತ್ತಿದ್ದಾರೆ. ಅಷ್ಟಕ್ಕೂ ಕುರ್ಚಿಯಿಂದ ಬೀಳುವುದು ಅವರಿಗೆ ಶುಭ ಸೂಚನೆ ಇರಬಹುದು. ಆದರೆ ಇದು ಮುಂದಿನ ಚುನಾವಣೆಯಲ್ಲಿ ಏನಾಗುತ್ತದೆ ಎಂಬುದರ ಮನ್ಸೂಚನೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು. 


ಎರಡು ಕ್ಷೇತ್ರದಿಂದ ಸ್ಪರ್ಧೆ
ರಾಮನಗರ ನನ್ನ ಕರ್ಮ ಭೂಮಿ. ಅದಕ್ಕೆ ಅಲ್ಲೇ ಸ್ಪರ್ಧೆ ಮಾಡ್ತೀನಿ. ಕಾರ್ಯಕರ್ತರ ಒತ್ತಾಯದ ಮೇರೆಗೆ ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ ಡಿ. ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನನ್ನ ಕುಟುಂಬದಿಂದ ಇಬ್ಬರನ್ನು ಬಿಟ್ಟರೆ ಯಾರೂ ಸ್ಪರ್ಧಿಸೋಲ್ಲ. ಹಾಗಾಗಿ ಎರಡು ಕ್ಷೇತ್ರಗಳಲ್ಲಿ ನಾನೇ ಸ್ಪರ್ಧೆ ಮಾಡುತ್ತಿದ್ದೇನೆ ಎಂದರು. ಆದರೆ ಮುಂಬರಲಿರುವ ಲೋಕಸಭಾ ಚುನಾವಣೆಯನ್ನೂ ಗಮನದಲ್ಲಿಟ್ಟುಕೊಂಡು ಕುಮಾರಸ್ವಾಮಿ ಅವರು ಚನ್ನಪಟ್ಟಣದಿಂದಲೂ ಸ್ಪರ್ಧಿಸುವ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ. 


ಸಿದ್ದರಾಮಯ್ಯ ಸೋಲಿಸಲು ಅಖಾಡಕ್ಕೇ ಇಳಿಯಲಿರುವ ಕುಮಾರಸ್ವಾಮಿ
ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಾಗಿರುವ ಮೈಸೂರನ್ನು ಪ್ರತಿಷ್ಠೆಯ ಕಣವಾಗಿ ತೆಗೆದುಕೊಂಡಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯಲ್ಲಿ ಮೂರು ದಿನಗಳ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ. ಇದೇ ಏ.14 ರಿಂದ ಏ.16ರವರೆಗೆ ಚಾಮುಂಡೇಶ್ವರಿ  ಕ್ಷೇತ್ರದಲ್ಲಿ  ಜಿ.ಟಿ. ದೇವೇಗೌಡರ ಜತೆ ಪ್ರಚಾರ ಮಾಡುತ್ತಿದ್ದೇನೆ. ಸಾಧ್ಯವಾದಷ್ಟು ಎಲ್ಲಾ ಗ್ರಾಮಗಳಿಗೆ ಭೇಟಿ ಕೊಟ್ಟು ಚುನಾವಣೆ ಪ್ರಚಾರ ಮಾಡುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಕ್ಷೇತ್ರದಲ್ಲಿ ನನಗೆ ಸಿಕ್ಕಿರುವ ಬೆಂಬಲ ಎಂತಹದ್ದು ಎಂಬುದನ್ನು ಕೂಡ ತೋರಿಸುವುದಾಗಿ ಕುಮಾರಸ್ವಾಮಿ ಹೇಳಿದರು.