ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧೆ: ಹೆಚ್.ಡಿ. ದೇವೇಗೌಡ
ಮೊಮ್ಮಗ ಪ್ರಜ್ವಲ್ ರೇವಣ್ಣ ಸ್ಪರ್ಧೆ ಖಚಿತ ಪಡಿಸಿದ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ
ಹಾಸನ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹೆಚ್.ಡಿ. ರೇವಣ್ಣ ಅವರ ಮಗ ಪ್ರಜ್ವಲ್ ರೇವಣ್ಣ ಸ್ಪರ್ಧಿಸುವುದು ಖಚಿತ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ಶ್ರಾವಣ ಮಾಸದ ಮೊದಲ ಸೋಮವಾರದ ಅಂಗವಾಗಿ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯ ಈಶ್ವರ ದೇವಸ್ಥಾನದಲ್ಲಿ ಪೂಜೆಯಲ್ಲಿ ಭಾಗವಹಿಸಿ ಬಳಿಕ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ದೇವೇಗೌಡರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು. 2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ಸ್ಪರ್ಧೆ ಖಚಿತ. ಆದರೆ, ಎಲ್ಲಿಂದ ಸ್ಪರ್ಧಿಸಬೇಕು ಎಂಬುದನ್ನು ಇನ್ನೂ ನಿರ್ಧಾರ ಮಾಡಿಲ್ಲ ಎಂದು ಗೌಡರು ತಿಳಿಸಿದರು.
ಒಂದು ವೇಳೆ ಹಾಸನದಿಂದ ಪ್ರಜ್ವಲ್ ಸ್ಪರ್ಧಿಸಿದರೆ, ತಾವು ಮಂಡ್ಯದಿಂದ ಸ್ಪರ್ಧಿಸುವಿರೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “ನಿಲ್ಲುವವನಿದ್ದರೆ ನನ್ನ ಸ್ವಂತ ಊರು ಹಾಸನದಿಂದಲೇ ನಿಲ್ಲುತ್ತೇನೆ. ಮಂಡ್ಯಕ್ಕೆ ಹೋಗುವ ಯಾವುದೇ ಉದ್ದೇಶವಿಲ್ಲ” ಎಂದರು.