ಬೆಂಗಳೂರು: ಉಪಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಯಾರೂ ಸ್ಪರ್ಧೆ ಮಾಡುವುದಿಲ್ಲ. ಕೆ.ಆರ್. ಪೇಟೆ, ಹುಣಸೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಸ್ಥಳೀಯ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ನಗರದ ಜೆಪಿ ಭವನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು, ನಾನಿಂದು ಹುಣಸೂರಿಗೆ ಪ್ರಯಾಣ ಬೆಳೆಸಲಿದ್ದು, ಈಗಾಗಲೇ ನನ್ನ ಮನೆಯಲ್ಲಿ ಹುಣಸೂರಿನ ಹಳೆ ಸ್ನೇಹಿತರ ಜೊತೆ ಸಭೆ ನಡೆಸಿ ಚುನಾವಣೆ ಕುರಿತು ಮಾಡಿದ್ದೇನೆ. ಪ್ರತಿ ಬಾರಿ ಒಂದೊಂದು ‌ಅಭ್ಯರ್ಥಿಗಳನ್ನು ಹೊರಗಿನಿಂದ ಕರೆದುಕೊಂಡು ಬರ್ತೀರಾ. ಆಮೇಲೆ ಅವರನ್ನು ಗೆಲ್ಲಿಸ್ತೀವಿ. ಆದರೆ ಕೊನೆಗೆ ಅವರು ಪಕ್ಷಕ್ಕೆ ದ್ರೋಹ ಮಾಡಿ ಹೋಗ್ತಾರೆ ಎಂಬ ಗಂಭೀರ ವಿಷಯವನ್ನು ಅವರು ಪ್ರಸ್ತಾಪಿಸಿದ್ದಾರೆ ಎಂದರು.


ಇದೇ ಸಂದರ್ಭದಲ್ಲಿ ಕೆಲವರು ಪ್ರಜ್ವಲ್ ರೇವಣ್ಣ ಅವರನ್ನು ವಿಧಾನಸಭೆ ಉಪಚುನಾವಣೆಯಲ್ಲಿ ನಿಲ್ಲಿಸಿ, ತಮ್ಮನ್ನು(ದೇವೇಗೌಡ) ಪಾರ್ಲಿಮೆಂಟ್ ಗೆ ಹೋಗಿ ಎಂದು ಮನವಿ ಮಾಡಿರುವುದಾಗಿಯೂ, ಅದಕ್ಕೆ ತಾವು ಒಬ್ಬ ಯಂಗ್ ಮ್ಯಾನ್ ಪಾರ್ಲಿಮೆಂಟ್ ‌ಗೆ ಹೋಗಿದ್ದಾನೆ. ಹೀಗಾಗಿ ನಾನು ಮನೆಯಲ್ಲೇ ಕುಳಿತು ಕೊಂಡು ಪಕ್ಷ ‌ಕಟ್ಟುತ್ತೀನಿ ಎಂದಿರುವುದಾಗಿಯೂ ಗೌಡರು ಮಾಹಿತಿ ನೀಡಿದರು.


ಉಪಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಯಾರೂ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ ಜೆಡಿಎಸ್ ವರಿಷ್ಠರು ಕೆ.ಆರ್.ಪೇಟೆ ಮತ್ತು ಹುಣಸೂರು ಕ್ಷೇತ್ರದಲ್ಲಿ ಸ್ಥಳೀಯ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಸುಳಿವು ನೀಡಿದರು.


'ಬಿ' ಟೀಂ ಎಂದಿದ್ದ ಸಿದ್ದರಾಮಯ್ಯಗೆ ಪರೋಕ್ಷ ಟಾಂಗ್ ನೀಡಿದ ಹೆಚ್‌ಡಿಡಿ:
ಯಾರು ಇನ್ಮುಂದೆ ನಮ್ಮ ಪಕ್ಷವನ್ನು ‌ಬಿ ಟೀಮ್ಎಂದು ಕರೆಯೋದಕ್ಕೆ ಆಗೋದಿಲ್ಲ ನಾನು‌ ಅದನ್ನೆಲ್ಲಾ ಇಷ್ಟು ದಿನ ಸಹಿಸಿಕೊಂಡು ‌ಸುಮ್ಮನೆ ಇದ್ದೆ. ಆದರೆ ‌ಅದು ಇನ್ಮುಂದೆ ಅದೆಲ್ಲಾ ನಡೆಯುವುದಿಲ್ಲ. ಕಳೆದ ಚುನಾವಣೆ ವೇಳೆ ಕಾಂಗ್ರೆಸ್ ‌ನವರು ಏನೇ ಪ್ರಯತ್ನ ಮಾಡಿದ್ರು ಕೊನೆಗೆ ಸಕ್ಸಸ್ ಆಯ್ತ ಎಂದು ಪ್ರಶ್ನಿಸಿದ ಹೆಚ್‌ಡಿಡಿ, ಕಾಂಗ್ರೆಸ್ 130 ಇದ್ದವರು ಕೊನೆಗೆ 78ಕ್ಕೆ ಬಂದರು ಎಂದು ಜೆಡಿಎಸ್ ಅನ್ನು 'ಬಿ' ಟೀಂ ಎಂದಿದ್ದ ಸಿದ್ದರಾಮಯ್ಯಗೆ ಪರೋಕ್ಷವಾಗಿ ಟಾಂಗ್ ನೀಡಿದರು.


ಮೈತ್ರಿ ಬಗ್ಗೆ ಕಾಂಗ್ರೆಸ್ ನಾಯಕರ ನಿರ್ಧಾರಕ್ಕೆ ನಮ್ಮ ಸಹಮತ: 
ಉಪಚುನಾವಣೆಯಲ್ಲಿ 17 ಕ್ಷೇತ್ರಗಳಲ್ಲೂ ಜೆಡಿಎಸ್ ಸ್ಪರ್ಧಿಸಲಿದೆಯೇ? ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹೆಚ್‌ಡಿಡಿ, 17 ಕ್ಷೇತ್ರಗಳಲ್ಲೂ ನಿಲ್ಲಬೇಕು ಅಂತ ಏನಿಲ್ಲ. ಹಿಂದೆ ಕಾಂಗ್ರೆಸ್ ಗೆ ಗುಂಡ್ಲುಪೇಟೆ, ನಂಜನಗೂಡು ಕ್ಷೇತ್ರವನ್ನು ನಾನೇ ಬಿಟ್ಟುಕೊಟ್ಟಿದ್ದೆ. ಅಂದು ನಮ್ಮ ಅಭ್ಯರ್ಥಿಗಳನ್ನು ಕಾಂಗ್ರೆಸ್ ನವರೇ ಕರೆದುಕೊಂಡು ಹೋಗಿ ಗೆಲ್ಲಿಸಿದ್ದಾರೆ. ಮೈತ್ರಿ ಮುಂದುವರೆಸುವ ಬಗ್ಗೆ ಸೋನಿಯಾ ಗಾಂಧಿ ‌ಏನು ನಿರ್ಧಾರ ಕೈಗೊಳ್ತಾರೋ ಗೊತ್ತಿಲ್ಲ. ಅವರ ಜೊತೆ ಚರ್ಚೆ ಮಾಡಿದ ಬಳಿಕ ಮೈತ್ರಿ ಮುಂದುವರೆಸುವ ಬಗ್ಗೆ ನಿರ್ಧಾರ ಮಾಡ್ತೀನಿ. ನಮ್ಮ ಶಕ್ತಿ ಏನಿದೆಯೋ ಅದನ್ನು ‌ಸಮರ್ಥವಾಗಿ ಬಳಕೆ ಮಾಡಿಕೊಳ್ಳುತ್ತೇವೆ. ಮೈತ್ರಿ ಬಗ್ಗೆ ಸ್ಥಳೀಯ ಕಾಂಗ್ರೆಸ್ ‌ನಾಯಕರ‌ ಭಾವನೆ ಏನಿದೆ ಎಂಬುದು ಗೊತ್ತಿಲ್ಲ. ಅವರ ಪಕ್ಷದ ನಾಯಕರು ಒಂದು ತೀರ್ಮಾನಕ್ಕೆ ಬಂದರೆ ಅದಕ್ಕೆ ನಮ್ಮ ಸಹಮತ ಇರುತ್ತದೆ ಎಂದು ಹೇಳಿದರು.